ADVERTISEMENT

ವಕೀಲರ ಪರಿಷತ್‌ ಅಧ್ಯಕ್ಷರಿಗೆ ಇಂಗ್ಲಿಷ್‌ ಬರುವುದಿಲ್ಲ: ಎಎಬಿ ಪತ್ರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 16:05 IST
Last Updated 31 ಜುಲೈ 2025, 16:05 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ನಾಮ ನಿರ್ದೇಶಿತ ಹಾಲಿ ಅಧ್ಯಕ್ಷರಿಗೆ ಇಂಗ್ಲಿಷ್‌ ಬರುವುದಿಲ್ಲ. ಈ ಕೂಡಲೇ ಇವರನ್ನು ಬದಲಿಸಿ ಇಂಗ್ಲಿಷ್‌ ಭಾಷಾ ಜ್ಞಾನ ಇರುವ ಬೇರೊಬ್ಬರನ್ನು ನೇಮಕ ಮಾಡಬೇಕು’ ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಪತ್ರ ಬರೆದು ಆಗ್ರಹಿಸಿದೆ.

ADVERTISEMENT

ಈ ಸಂಬಂಧ ಎಎಬಿ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್‌.ಗಿರೀಶ್‌ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್‌ ಸಹಿ ಮಾಡಿರುವ ಅಧಿಕೃತ ಪತ್ರವನ್ನು ಬಿಸಿಐ ಅಧ್ಯಕ್ಷರಿಗೆ ರವಾನಿಸಲಾಗಿದೆ.

ಪತ್ರದಲ್ಲಿ ಏನಿದೆ?:

‘ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಭು ಬಖ್ರು ಅವರಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ, ಸ್ವಾಗತ ಭಾಷಣ ಓದಿದ ಕೆಎಸ್‌ಬಿಸಿ ನಾಮ ನಿರ್ದೇಶಿತ ಅಧ್ಯಕ್ಷ ಎಸ್.ಎಸ್‌.ಮಿಟ್ಟಲಕೋಡ್‌ ಅವರು ತಮ್ಮ ಭಾಷಣದುದ್ದಕ್ಕೂ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಜಯಂತ್‌ ಬ್ಯಾನರ್ಜಿ ಅವರ ಹೆಸರುಗಳನ್ನೇ ತಪ್ಪಾಗಿ ಉಚ್ಚರಿಸಿದರು. ಇದರಿಂದ ಮುಜುಗರ ಉಂಟಾಯಿತು.

ಇನ್ನು ಮುಂದೆ ಹೈಕೋರ್ಟ್‌ ಹಾಲ್‌ 1ರಲ್ಲಿ ಪರಿಷತ್‌ ಅಧ್ಯಕ್ಷರು ರಾಜ್ಯ ಪರಿಷತ್‌ ಪ್ರತಿನಿಧಿಯಾಗಿ ಮಾತನಾಡಬೇಕಾದ ಸಂದರ್ಭ ಬಂದಲ್ಲಿ ಮಿಟ್ಟಲ್‌ಕೋಡ್‌ ಅವರ ಬದಲಿಗೆ ಪರಿಷತ್‌ನ ಬೇರೊಬ್ಬ ಸದಸ್ಯರು ಮಾತನಾಡುವಂತಾಗಬೇಕು. ಇಲ್ಲವೇ, ಮಿಟ್ಟಲ್‌ಕೋಡ್‌ ಅವರೇ ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ನಿರ್ದೇಶಿಸಬೇಕು. ಒಂದು ವೇಳೆ ತಾವು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳದೇ ಹೋದರೆ ನಾವು ಈ ವಿಷಯವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.