ಬೆಂಗಳೂರು: ‘ರಾಜ್ಯದ ವಿವಿಧೆಡೆ ಒಟ್ಟು ₹4,071.11 ಕೋಟಿ ಮೊತ್ತದ 88 ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಇದರಿಂದ 10,585 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ನಡೆದ ಸಮಿತಿಯ ಸಭೆಯಲ್ಲಿ ಕೈಗಾರಿಕೆ ಸ್ಥಾಪನೆಯ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ.
‘ಬೆಂಗಳೂರಿನ ಆನೇಕಲ್‌ನ ವೀರಸಂದ್ರದಲ್ಲಿ ಅರಾಟ್ ಒನ್ ವರ್ಲ್ಡ್ ಪ್ರೈ.ಲಿ. ₹485 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಲಿದೆ. ಈ ಘಟಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ 1,000 ಮಂದಿಗೆ ಉದ್ಯೋಗ ಸಿಗಲಿದೆ. ಡೇರಿ ಕ್ಲಾಸಿಕ್ ಐಸ್ ಕ್ರೀಂ ಸಂಸ್ಥೆಯು, ಕಲಬುರ್ಗಿಯ ನಂದೂರು ಕಾಸರಟಗಿ ಕೈಗಾರಿಕಾ ಪ್ರದೇಶದಲ್ಲಿ ₹285 ಕೋಟಿ ವೆಚ್ಚದಲ್ಲಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪಿಸಲಿದೆ. ಇಲ್ಲಿ 900 ಜನರಿಗೆ ಉದ್ಯೋಗ ಸಿಗಲಿದೆ’ ಎಂದು ಮಾಹಿತಿ ನೀಡಿದರು.
‘₹50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ಒಟ್ಟು ₹2,031.76 ಕೋಟಿ ಹೂಡಿಕೆಯಾಗಲಿದ್ದು, 3,302 ಉದ್ಯೋಗ ಸೃಷ್ಟಿಯಾಗಲಿವೆ. ₹15 ಕೋಟಿಯಿಂದ ₹50 ಕೋಟಿವರೆಗಿನ ಮೊತ್ತದ 68 ಯೋಜನೆಗಳಿಂದ ಒಟ್ಟು ₹1,355.07 ಕೋಟಿ ಹೂಡಿಕೆಯಾಗಲಿದ್ದು, 5,049 ಉದ್ಯೋಗ ಸೃಷ್ಟಿಯಾಗಲಿವೆ’ ಎಂದರು.
‘ಅತ್ಯಧಿಕ ಬಂಡವಾಳ ಹೂಡಿಕೆಯ ಆರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹684.28 ಕೋಟಿ ಹೂಡಿಕೆ ಮತ್ತು 2,234 ಉದ್ಯೋಗ ಸೃಷ್ಟಿಯಾಗಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.