ADVERTISEMENT

JDS ಸಖ್ಯದ ಬಗ್ಗೆ ಪ್ರಲ್ಹಾದ ಜೋಷಿ ಅವರಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ: ಯತ್ನಾಳ

ಹೊಸಪೇಟೆಯಲ್ಲಿ ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 7:51 IST
Last Updated 9 ಸೆಪ್ಟೆಂಬರ್ 2023, 7:51 IST
<div class="paragraphs"><p>ಶಾಸಕ ಬಸನಗೌಡ ಪಾಟೀಲ ಯತ್ನಾಳ</p></div>

ಶಾಸಕ ಬಸನಗೌಡ ಪಾಟೀಲ ಯತ್ನಾಳ

   

ಹೊಸಪೇಟೆ (ವಿಜಯನಗರ): ಜೆಡಿಎಸ್‌ ಜತೆಗೆ ಬಿಜೆಪಿ ಸಖ್ಯ ಮಾಡಿಕೊಂಡಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ಏನೂ ಹೇಳಿಲ್ಲ. ಪಕ್ಷದ ನಾಯಕರಾದ ಯಡಿಯೂರ‍ಪ್ಪ ಅವರಿಗೆ ಅವರದೇ ಆದ ಮೂಲದಿಂದ ಮಾಹಿತಿ ಲಭ್ಯವಾಗಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹೊಸಪೇಟೆಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪ್ರಲ್ಹಾದ ಜೋಷಿ ಅವರಿಗೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ತಿಳಿಸಿಲ್ಲ. ಹಾಗಂತ ಯಡಿಯೂರಪ್ಪ ಅವರ ಮಾತನ್ನು ಅಲ್ಲಗಳೆಯಲೂ ಹೋಗುವುದಿಲ್ಲ. ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುತ್ತೇನೆ ಎಂದರು.

ADVERTISEMENT

‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು‘ ಎಂಬ ದಿನೇಶ್‌ ಗುಂಡೂರಾವ್‌ ಅವರ ವ್ಯಂಗ್ಯದ ಬಗ್ಗೆ ಪ್ರಸ್ತಾಪಿಸಿ, ಕಳೆದ ಬಾರಿ ಕಾಂಗ್ರೆಸ್‌ನವರು ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಾಗ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂದು ಹೇಳೋಣವೇ? ಎಂದು ಕುಟುಕಿದರು.

‘ಕಾಂಗ್ರೆಸ್‌ ತನ್ನ ಶಾಸಕರಿಗೆ ಬೆದರಿಕೆ ಹಾಕಲು ಬಿಜೆಪಿ ನಾಯಕರು ಬರುತ್ತಾರೆ ಎಂದು ಹೇಳುತ್ತ ಬಂದಿದೆ. ನಮ್ಮ ಪಕ್ಷದವರು ಯಾರೂ ಕಾಂಗ್ರೆಸ್ ಸೇರುವುದಿಲ್ಲ. ಈ ಸರ್ಕಾರಕ್ಕೆ ಯಾವ ಆಪರೇಷನ್ ಸಹ ಬೇಕಿಲ್ಲ. ನ್ಯಾಚುರಲ್ ಡೆಲಿವರಿಯೇ ಆಗಲಿದೆ. ಇನ್ನು ಮೂರ್ನಾಲ್ಕು ತಿಂಗಳು ಕಾಯಿರಿ’ ಎಂದು ಯತ್ನಾಳ ಹೇಳಿದರು.

’135 ಶಾಸಕರಿದ್ದಾರೆ, ಐದು ಗ್ಯಾರಂಟಿ ಕೊಟ್ಟಿದ್ದಾರೆ. ಅವರಿಗೆ ಆಪರೇಷನ್ ಮಾಡುವ ಅಗತ್ಯ ಏನಿದೆ? ಪಕ್ಷ ಒಡೆಯುತ್ತದೆ ಎಂಬ ಭಯ ಅವರಿಗೆ ತೀವ್ರವಾಗಿ ಕಾಡುತ್ತಿದೆ. ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್‌, ಬಿ.ಕೆ.ಹರಿಪ್ರಸಾದ್ ಅವರೆಲ್ಲ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಏನಾಯಿತು ಗೊತ್ತಲ್ಲ, ಎನ್‌ಸಿಪಿಯಲ್ಲಿ ಈಗ ಶರದ್‌ ಪವಾರ್‌, ಅವರ ಪುತ್ರಿ ಮಾತ್ರ ಉಳಿದಿದ್ದಾರೆ. ರಾಜ್ಯದಲ್ಲೂ ಅಂತಹ ಸ್ಥಿತಿ ಬಂದರೂ ಅಚ್ಚರಿ ಇಲ್ಲ’ ಎಂದರು.

ಸನಾತನ ಧರ್ಮವನ್ನು ಏಡ್ಸ್‌ಗೆ ಹೋಲಿಸಿದವರು ಹುಳುಗಳಂತೆ ನಾಶವಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.