ADVERTISEMENT

127 ಸ್ಥಳ, 497 ಕೇಂದ್ರಗಳಲ್ಲಿ ಪರೀಕ್ಷೆ: ರಾಜ್ಯದಾದ್ಯಂತ ಸಿಇಟಿ ನಿರಾತಂಕ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 9:18 IST
Last Updated 30 ಜುಲೈ 2020, 9:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಾದ್ಯಂತ 127 ಸ್ಥಳಗಳ 497 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷ (ಸಿಇಟಿ) ಗುರುವಾರ ಆರಂಭಗೊಂಡಿದ್ದು, ನಿರಾತಂಕವಾಗಿ ನಡೆಯುತ್ತಿದೆ.

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನಿರ್ದೇಶನದ ಅನ್ವಯ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಮತ್ತಿತರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಕೋವಿಡ್ ದೃಢಪಟ್ಟಿರುವ 40 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ, ಬೆಂಗಳೂರಿನಲ್ಲಿ 12 ಮಂದಿ ಇದ್ದಾರೆ. ಜ್ಞಾನಭಾರತಿ ಕೇಂದ್ರದಲ್ಲಿ 7, ಜಿಕೆವಿಕೆ ಕೇಂದ್ರದಲ್ಲಿ 5 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅವರನ್ನು ಅವರಿದ್ದ ಸ್ಥಳದಿಂದಲೇ ಆಂಬುಲೆನ್ಸ್‌ನಲ್ಲಿ ಕರೆತರಲಾಗಿದೆ. ಮತ್ತೆ ಅವರನ್ನು ಅಧಿಕಾರಿಗಳೇ ವಾಪಸ್ ಬಿಡಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಂಡಿದ್ದಾರೆ.

ADVERTISEMENT

ಉಪ ಮುಖ್ಯಮಂತ್ರಿ ಭೇಟಿ: ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಲ್ಲೇಶ್ವರದ ಎಂಇಎಸ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜಿಗೆ ಭೇಟಿ ನೀಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಸ್ಯಾನಿಟೈಸರ್ ಹಾಕುವುದು, ಥರ್ಮೊಮೀಟರ್ ಇಟ್ಟು ಪರಿಶೀಲಿಸುವ ವ್ಯವಸ್ಥೆ ನೋಡಿದರು. ಸಾರಿಗೆ, ಆರೋಗ್ಯ, ಪೊಲೀಸ್ ಮತ್ತು ಉನ್ನತ ಶಿಕ್ಷಣ ಇಲಾಖೆಗಳೆಲ್ಲ ಸೇರಿ ಕೈಗೊಂಡಿರುವ ಕ್ರಮಗಳ ಬಗ್ಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಏನಾದರೂ ಸಮಸ್ಯೆ ಆಯಿತೇ, ಬಸ್ ವ್ಯವಸ್ಥೆ ಇತ್ತೆ, ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಮಾರ್ಗದರ್ಶನ ಸಿಕ್ಕಿತೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆದರು.

ಆನ್‌ಲೈನ್ ಕೌನ್ಸೆಲಿಂಗ್: ಸಿಇಟಿ ಫಲಿತಾಂಶ ಬಂದ ನಂತರ ಕೌನ್ಸೆಲಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ನಡೆಸಲಾಗುವುದು. ವಿದ್ಯಾರ್ಥಿ ಮತ್ತು ಪೋಷಕರು ಸಿಇಟಿ ಘಟಕಕ್ಕೆ ಬರುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡಿಕೊಂಡ ಮೇಲೆ ನೇರವಾಗಿ ಕಾಲೇಜಿಗೆ ಹೋಗಿ ಪ್ರವೇಶ ಪಡೆಯಬಹುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.