ADVERTISEMENT

ಬೆಂಗಳೂರು: ಪೊಲೀಸರ ಸೋಗಿನಲ್ಲಿ 2 ಕೆ.ಜಿ ಚಿನ್ನ ಸುಲಿಗೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:21 IST
Last Updated 14 ಮಾರ್ಚ್ 2023, 4:21 IST
   

ಬೆಂಗಳೂರು: ರಾಯಚೂರಿನಿಂದ ನಗರಕ್ಕೆ ಬಂದಿದ್ದ ಚಿನ್ನದ ವ್ಯಾಪಾರಿಗಳ ಸಹಾಯಕರನ್ನು ಬೆದರಿಸಿ ಪೊಲೀಸರ ಸೋಗಿನಲ್ಲಿ 2 ಕೆ.ಜಿ 200 ಗ್ರಾಂ ಚಿನ್ನ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಾರ್ಚ್ 11ರಂದು ನಡೆದಿರುವ ಸುಲಿಗೆ ಬಗ್ಗೆ ರಾಯಚೂರಿನ ಅಬ್ದುಲ್ ರಜಾಕ್ ಅವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಅಬ್ದುಲ್ ರಜಾಕ್, ರಾಯಚೂರಿನ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರ ಸೂಚನೆ ಮೇರೆಗೆ ಚಿನ್ನ ಖರೀದಿಸಲು ಬೆಂಗಳೂರಿಗೆ ಬಂದಿದ್ದರು. ರಾಯಚೂರಿನ ಪರಿಚಯಸ್ಥ ಮಲ್ಲಯ್ಯ ಅವರೂ ಚಿನ್ನ ಖರೀದಿಸಲು ಬೆಂಗಳೂರಿಗೆ ಬಂದಿದ್ದು, ಲಾಡ್ಜ್‌ನಲ್ಲಿದ್ದರು. ಇದು ಗೊತ್ತಾಗುತ್ತಿದ್ದಂತೆ ಅಬ್ದುಲ್ ಸಹ ಲಾಡ್ಜ್‌ಗೆ ಹೋಗಿ ಅವರ ಜೊತೆ ಉಳಿದುಕೊಂಡಿದ್ದರು.’

ADVERTISEMENT

‘ಇಬ್ಬರೂ ಸೇರಿ ಮಾರುಕಟ್ಟೆಯಲ್ಲಿ 2 ಕೆ.ಜಿ ತೂಕದ ಚಿನ್ನದ ಗಟ್ಟಿ ಹಾಗೂ 200 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಇವುಗಳ ಮೌಲ್ಯ ₹1.12 ಕೋಟಿ. ಚಿನ್ನ ಖರೀದಿ ಮುಗಿಯುತ್ತಿದ್ದಂತೆ ರಾಯಚೂರಿಗೆ ಹೊರಡಲು ಸಿದ್ಧರಾದ ಇಬ್ಬರೂ ಮಾರ್ಚ್ 11ರಂದು ರಾತ್ರಿ ಆನಂದರಾವ್ ವೃತ್ತಕ್ಕೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಚಿನ್ನದ ಗಟ್ಟಿ, ಚಿನ್ನಾಭರಣ ಬ್ಯಾಗ್‌ನಲ್ಲಿತ್ತು. ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಅವರನ್ನು ಅಡ್ಡಗಟ್ಟಿದ್ದ ಇಬ್ಬರು, ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. ‘ನೀವು ಅಕ್ರಮವಾಗಿ ಚಿನ್ನಸಾಗಣೆ ಮಾಡುತ್ತಿದ್ದೀರಿ. ನಿಮ್ಮನ್ನು ಮೂರು ತಿಂಗಳಿನಿಂದ ಹಿಂಬಾಲಿಸುತ್ತಿದ್ದೇವೆ’ ಎಂದಿದ್ದರು. ನಂತರ, ಬ್ಯಾಗ್‌ ಸಮೇತ ಇಬ್ಬರನ್ನೂ ಆಟೊದಲ್ಲಿ ಹತ್ತಿಸಿಕೊಂಡು ಹೊರಟಿದ್ದರು’ ಎಂದರು.

‘ನೆಹರೂ ತಾರಾಲಯ ಬಳಿ ಇಬ್ಬರನ್ನೂ ಇಳಿಸಿ ಡಿ.ಸಿ ಕಚೇರಿಗೆ ಬನ್ನಿ ಎಂದು ತಿಳಿಸಿ ಬ್ಯಾಗ್ ಸಮೇತ ಆರೋಪಿಗಳು ಹೋಗಿದ್ದಾರೆ’ ಎಂದು ಹೇಳಿದರು.

ಪತ್ನಿ ಅಪಹರಣ: ಟ್ವೀಟ್ ಮೂಲಕ ದೂರು
ಬೆಂಗಳೂರು: ‘ನನ್ನ ಪತ್ನಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ನನ್ನ ಪತ್ನಿಯನ್ನು ಹುಡುಕಿಕೊಡಿ’ ಎಂದು ಛತ್ತೀಸಗಡದ ಕುಂತಲ್ ಬ್ಯಾನರ್ಜಿ ಎಂಬುವವರು ಬೆಂಗಳೂರು ಕಮಿಷನರ್ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವುದಾಗಿ ಹೇಳಿರುವ ಕಮಿಷನರ್ ಕಚೇರಿ ಸಿಬ್ಬಂದಿ, ‘ಸಂಬಂಧಿತ ಠಾಣೆಗೆ ಮಾಹಿತಿ ನೀಡಲಾಗಿದೆ’ ಎಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

‘ಪತ್ನಿ ಜೊತೆ ಛತ್ತೀಸಗಡದಲ್ಲಿ ವಾಸವಿದ್ದೆ. ಪತ್ನಿ ಅಪಹರಿಸಿರುವ ಅಪರಿಚಿತ ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ಇದೆ’ ಎಂದು ಕುಂತಲ್ ಹೇಳಿದ್ದಾರೆ. ಆರೋಪಿಯ ಮೊಬೈಲ್ ನಂಬರ್ ಹಾಗೂ ಫೋಟೊವನ್ನು ಟ್ವೀಟ್ ಜೊತೆ ಉಲ್ಲೇಖಿಸಿದ್ದಾರೆ.

ಜಲಮಂಡಳಿ ಕಾರ್ಮಿಕರ ಸುಲಿಗೆ: ರೌಡಿ ಬಂಧನ
ಬೈಯಪ್ಪನಹಳ್ಳಿ ರೈಲ್ವೆ ಗೇಟ್ ಬಳಿಯ ಕತ್ತಾಳಿಪಾಳ್ಯ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ನಡೆಯುತ್ತಿದ್ದ ಕಾಮಗಾರಿಯ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಡಿ ರೌಡಿ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ವಿ. ಸುಂದರ್‌ ರಾಮನ್ ಹಾಗೂ ಕಾರ್ಮಿಕರು, ಫೆ. 24ರಂದು ರಾತ್ರಿ ಕೆಲಸದಲ್ಲಿ ನಿರತರಾಗಿದ್ದರು. ರೌಡಿ ಎ. ರಾಜು ಅಲಿಯಾಸ್ ರಾಜ್‌ ದೊರೈ ತನ್ನ ಸಹಚರರ ಜೊತೆಗೆ ಸ್ಥಳಕ್ಕೆ ಹೋಗಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಕಾರ್ಮಿಕರಿಂದ ₹ 9 ಸಾವಿರ ಹಾಗೂ ಮೊಬೈಲ್‌ ಕಿತ್ತುಕೊಂಡಿದ್ದ. ಗೂಗಲ್ ಪೇ ಆ್ಯಪ್ ಮೂಲಕ ತನ್ನ ಖಾತೆಗೆ ₹40,000 ವರ್ಗಾಯಿಸಿಕೊಂಡಿದ್ದ. ನಂತರ, ಸ್ಥಳದಲ್ಲಿದ್ದ ಡೀಸೆಲ್, ಪೆಟ್ರೋಲ್ ಕ್ಯಾನ್‌ ತೆಗೆದುಕೊಂಡು ಪರಾರಿಯಾಗಿದ್ದ’ ಎಂದರು.

‘ದೂರು ಆಧರಿಸಿ ರಾಜ್‌ ದೊರೈ, ಸಹಚರರಾದ ಕೆ. ಅರುಣ್‌ಕುಮಾರ್, ಎ. ದಿನೇಶ್, ಯಾಸೀನ್, ಜೆ. ಜೋಸೆಫ್, ಕೆ. ಕಾರ್ತಿಕ್ ಅವರನ್ನು ಬಂಧಿಸಿ ₹ 40,000, ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.