ADVERTISEMENT

ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲ: ಸಂಸತ್‌ ವಿಶೇಷ ಅಧಿವೇಶನ ಕರೆಯಲು ಮನವಿ

ರಾಷ್ಟ್ರೀಯ ಸರ್ಕಾರ ರಚಿಸಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ‘ಕೋವಿಡ್‌ ನಿಯಂತ್ರಣದ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸಲು, ಜನತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವ ಹಾಗೂ ಸಾರ್ವಜನಿಕ ಜೀವನದಲ್ಲಿ ನೈತಿಕತೆಯನ್ನು ಮರುಸ್ಥಾಪಿಸಲು ರಾಷ್ಟ್ರೀಯ ಸರ್ಕಾರ ರಚನೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು’ ಎಂದು ರಾಷ್ಟ್ರಪತಿ ಅವರನ್ನು ಜನತಂತ್ರ ಸಮಾಜ, ಇತರ ಸಂಘಟನೆಗಳು ಆಗ್ರಹಿಸಿವೆ.

ರಾಷ್ಟ್ರೀಯ ಸರ್ಕಾರ ರಚನೆಯಿಂದ ಕೋವಿಡ್‌ನಿಂದಾಗುತ್ತಿರುವ ಅನಾಹುತಗಳನ್ನು ತಡೆಯವಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳಬಹುದಾಗಿದೆ. ರಾಷ್ಟ್ರೀಯ ವಿಪತ್ತು ಎದುರಿಸಲು ರಾಷ್ಟ್ರೀಯ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ರೂಪಿಸಬೇಕು ಎಂದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ, ರಾಜ್ಯಸಭೆ ಅಧ್ಯಕ್ಷ, ಲೋಕಸಭೆ ಸ್ಪೀಕರ್‌, ವಿರೋಧಪಕ್ಷ ನಾಯಕರು, ಪ್ರಧಾನಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.

ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು, ದುಸ್ಥಿತಿಯಲ್ಲಿರುವ ಜನವರ್ಗ, ವಲಸೆ ಕಾರ್ಮಿಕರಿಗೆಜೀವನೋಪಾಯ ಒದಗಿಸಲು ಇಂತಹ ಕ್ರಮ ಅಗತ್ಯವಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

ಆಮ್ಲಜನಕ, ಔಷಧ, ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದ ಹೃದಯ ವಿದ್ರಾವಕ ಘಟನೆ, ಸಾವಿನ ಸರಣಿ ನೋಡಬೇಕಾಗಿದೆ. ಶವ ಸಾಗಣೆಗೆ ದುಪ್ಪಟ್ಟು ಹಣ ನೀಡಬೇಕಾಗಿದೆ. ಕೋವಿಡ್‌ ಪರಿಣಾಮ ತಡೆಗೆ ಒಕ್ಕೂಟ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಸರ್ಕಾರ ಕೈಚೆಲ್ಲಿದೆ. ಸರ್ಕಾರವೂ ಸಮಸ್ಯೆಯ ಭಾಗವಾಗಿರುವ ಹಿನ್ನೆಲೆಯಲ್ಲಿ ಈ ಮನವಿ ಮಾಡಿಕೊಳ್ಳಲಾಗಿದೆ.

ಒಕ್ಕೂಟ ಸರ್ಕಾರ ಮೊದಲ ಅಲೆಯಿಂದ ಪಾಠ ಕಲಿತಿಲ್ಲ. ತಜ್ಞರು ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಲಕ್ಷಾಂತರ ಜನ ಸೇರುವ ಕುಂಭಮೇಳದಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಿತು. ಚುನಾವಣೆಗೆ ಬೃಹತ್‌ ರಾಜಕೀಯ ರ‍್ಯಾಲಿ ಆಯೋಜಿಸಲಾಯಿತು. ಇವುಗಳಲ್ಲಿ ಪ್ರಧಾನಮಂತ್ರಿ, ಗೃಹ ಸಚಿವರೇ ಭಾಗಿಯಾಗಿದ್ದರು. ಇದು ಕೋವಿಡ್‌ ಹೆಚ್ಚಲು ಕಾರಣವಾಯಿತು. ಉಚಿತ ಲಸಿಕೆ ಕಾರ್ಯಕ್ರಮದಿಂದಲೂ ಸರ್ಕಾರ ನುಣಚಿಕೊಂಡಿದೆ ಎಂದು ಸಂಘಟನೆಗಳ ಮುಖಂಡರು ದೂರಿದ್ದಾರೆ.

ನರೇಗಾದಡಿ ಉದ್ಯೋಗವಕಾಶವನ್ನು 100 ರಿಂದ 200 ದಿನಕ್ಕೆ ಹೆಚ್ಚಿಸಬೇಕು. ಇದನ್ನು ನಗರ ವ್ಯಾಪ್ತಿಗೂ ವಿಸ್ತರಿಸಬೇಕು. ಸಮಾಜದಲ್ಲಿ ಹಸಿವು ಎದುರಿಸುತ್ತಿರುವ ಜನರ ಜೀವನೋಪಾಯ ನಿರ್ವಹಣೆಗೆ ಬೇಕಾಗುವ ಸಂಪನ್ಮೂಲವನ್ನು ದೇಶದ ಅತ್ಯಂತ ಶ್ರೀಮಂತರು ಹಾಗೂ ಅವರ ಉದ್ಯಮಗಳ ಮೇಲೆ ಶೇ2ರಷ್ಟು ತೆರಿಗೆ ವಿಧಿಸುವ ಮೂಲಕ ಸಂಗ್ರಹಿಸಬಹುದಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಸಾರ್ವತ್ರಿಕ ಲಸಿಕೆ ಆಂದೋಲನ ಜವಾಬ್ದಾರಿಯಿಂದ ನುಣಚಿಕೊಂಡಿರುವ ಸರ್ಕಾರ, ಅದರ ಅರ್ಧ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಿದೆ. ಸಂಪೂರ್ಣಸಂವೇದನೆ ಕಳೆದುಕೊಂಡ ಅಸಮರ್ಥ ಸರ್ಕಾರವಾಗಿದೆ. ಸರ್ಕಾರ, ಹಾಗೂ ದರ ಸಹಾಯಕ ಪರಿವಾರದ ಸಂಸ್ಥೆಗಳಿಗೆ ಆತ್ಮನಿರೀಕ್ಷಣೆಯ ಧೈರ್ಯವಿಲ್ಲ. ಗಂಭೀರ ಸ್ಥಿತಿ ಒಪ್ಪುವ ಮನಸ್ಸೂ ಇಲ್ಲ ಎಂದಿದ್ದಾರೆ.

ಇಂತಹ ಸಂದರ್ಭದಲ್ಲಿಯೂ ಕೋವಿಡ್‌ ವಾರಿಯರ್ಸ್‌ ಜೀವಪಣಕ್ಕಿಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯಗಳು ಬದ್ಧತೆಯಿಂದ ತಮ್ಮ ಸಂವಿಧಾನಾತ್ಮಕ ಪಾತ್ರ ನಿರ್ವಹಿಸುತ್ತಿವೆ. ಕೆಲವು ಮಾಧ್ಯಮಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ. ಅವುಗಳ ಕೈಗಳು ರಕ್ತಸಿಕ್ತವಾಗಿವೆ ಎಂದೂ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊವಿಡ್ ವ್ಯಾಕ್ಸಿನ್ ಸಂಬಂಧಿಸಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಒಪ್ಪಂದದ ಕೆಲವು ನಿರ್ಬಂಧಗಳನ್ನು ರದ್ದು ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳು ಮುಂದೆ ಬಂದಿರುವುದು ಸ್ವಾಗತಾರ್ಹ. ಲಸಿಕೆ ಉತ್ಪಾದನೆ ಹೆಚ್ಚಿಸಿ, ಎಲ್ಲರಿಗೂ ನೀಡುವ ಮೂಲಕ ಪರಿಣಾಮಕಾರಿ ಹೋರಾಟವೇ ಇದರ ಉದ್ದೇಶ ಎಂದು ಜನತಂತ್ರ ಸಮಾಜದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ, ಜನಾಂದೋಲನ ಮಹಾಮೈತ್ರಿ ಸ್ಥಾಪಕ ಸದಸ್ಯ ದೇವನೂರ ಮಹಾದೇವ, ಸ್ವರಾಜ್‌ ಅಭಿಯಾನದ ಮಾಜಿ ಸಂಚಾಲಕ ಪ್ರೊ. ಆನಂದಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜನಸಂಗ್ರಾಮ ಪರಿಷತ್‌ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮತ್ತಿತರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.