ADVERTISEMENT

ನಮ್ಮ ವಿರುದ್ಧ ಸುಳ್ಳು ಆರೋಪ: ರೇಣುಕಾಚಾರ್ಯ ಅಣ್ಣ ದಾರಕೇಶ್ವರಯ್ಯ

ಜಾತಿ ಪ್ರಮಾಣಪತ್ರ ಹೈಕೋರ್ಟ್‌ ಸಿಂಧುಗೊಳಿಸಿದೆ: ಎಂ.ಪಿ.ದಾರಕೇಶ್ವರಯ್ಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:36 IST
Last Updated 28 ಮಾರ್ಚ್ 2022, 19:36 IST
ಎಂ.ಪಿ. ದಾರಕೇಶ್ವರಯ್ಯ
ಎಂ.ಪಿ. ದಾರಕೇಶ್ವರಯ್ಯ   

ದಾವಣಗೆರೆ: ‘ನಮ್ಮ ಕುಟುಂಬ ಪಡೆದ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಹೈಕೋರ್ಟ್‌ ಸಿಂಧುಗೊಳಿಸಿದ್ದರೂ ವಿಧಾನಸಭೆಯಲ್ಲಿ ತಪ್ಪು ಮಾಹಿತಿ ನೀಡಿ ಶಾಸಕರು ಆರೋಪ ಮಾಡಿದ್ದಾರೆ’ ಎಂದು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಪಿ.ದಾರಕೇಶ್ವರಯ್ಯ ಆರೋಪಿಸಿದ್ದಾರೆ.

‘ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಶಾಸಕರಾದ ಪಿ.ರಾಜೀವ್‌, ಗೂಳಿಹಟ್ಟಿ ಶೇಖರ್‌, ಪ್ರಿಯಾಂಕ್‌ ಖರ್ಗೆ, ಎನ್‌.ಮಹೇಶ್‌ ಅವರ ಶಾಸಕತ್ವವನ್ನು ರದ್ದುಗೊಳಿಸಬೇಕು’ ಎಂದು ಶಾಸಕ ರೇಣುಕಾಚಾರ್ಯ ಅವರ ಅಣ್ಣನೂ ಆಗಿರುವ ದಾರಕೇಶ್ವರಯ್ಯ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕಲಬುರಗಿ ಲೋಕಸಭಾ ಹಾಗೂ ಕನಕಗಿರಿ ವಿಧಾನಸಭಾ ಮೀಸಲು ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದಾಗ ನಾಮಪತ್ರವನ್ನು ತಿರಸ್ಕರಿಸಿರಲಿಲ್ಲ. ಬೇಡ ಜಂಗಮ ಪ್ರಮಾಣಪತ್ರವನ್ನು ನಮಗೆ ನೀಡುವಂತೆ ಹೈಕೋರ್ಟ್‌ ಕೂಡ ಆದೇಶ ನೀಡಿದೆ. ಹೀಗಿದ್ದರೂ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಬೇಡ ಜಂಗಮ ಪ್ರಮಾಣಪತ್ರ ಪಡೆದಿರುವ ಧಾರವಾಡದ ವಕೀಲ ವೀರಣ್ಣ ಹಿರೇಮಠ ಅವರ ಪುತ್ರಿ ಚೇತನಾ ಹಿರೇಮಠ ಅವರಿಗೆ ₹ 45 ಲಕ್ಷ ಸಾಲ ಸೌಲಭ್ಯ ಪ್ರಮಾಣಪತ್ರವನ್ನು ಸಿದ್ದರಾಮಯ್ಯ ಅವರೇ ನೀಡಿರುವ ಬಗ್ಗೆ ದಾಖಲೆ ಇದೆ’ ಎಂದು ಹೇಳಿದ್ದಾರೆ.

‘ನನ್ನ ಸಹೋದರನ ಪುತ್ರಿ ಚೇತನಾಗೆ ಬೇಡ ಜಂಗಮ ಪ್ರಮಾಣಪತ್ರವನ್ನು ನಾನು ಕೊಡಿಸಿದ್ದರೂ ಯಾವುದೇ ಸರ್ಕಾರಿ ಸೌಲಭ್ಯ ಪಡೆದುಕೊಂಡಿಲ್ಲ. ಚುನಾವಣೆಗೆ ಸ್ಪರ್ಧಿಸಲು ಮಾತ್ರ ಈ ಪ್ರಮಾಣಪತ್ರವನ್ನು ಬಳಸಿಕೊಂಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ದಾರಕೇಶ್ವರಯ್ಯಗೆ ಮುತ್ತಿಗೆ, ಪ್ರತಿಭಟನೆ

ದಾವಣಗೆರೆ: ಎಂ.ಪಿ.ದಾರಕೇಶ್ವರಯ್ಯ ಅವರು ‘ಬೇಡ ಜಂಗಮ’ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ಖಂಡಿಸಿ ಸಮುದಾಯದ ಮುಖಂಡರು ಸೋಮವಾರ ಮುತ್ತಿಗೆ, ಹಾಕಿ ಪ್ರತಿಭಟಿಸಿದರು.

ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಪ್ರತಿಭಟನಕಾರರಿಂದ ದಾರಕೇಶ್ವರಯ್ಯ ಅವರನ್ನು ರಕ್ಷಿಸಿ ವಾಹನದಲ್ಲಿ ಕರೆದುಕೊಂಡು ಹೋದರು. ‘ಬೇಡ ಜಂಗಮ’ ಪ್ರಮಾಣಪತ್ರ ಕುರಿತು ಪತ್ರಿಕಾಗೋಷ್ಠಿ ನಡೆಸಿ ಹೊರಕ್ಕೆ ಬರುತ್ತಿದ್ದಂತೆ ಪರಿಶಿಷ್ಟ ಕಾರ್ಯಕರ್ತರು ಸುತ್ತುವರಿದು ಘೋಷಣೆಗಳನ್ನು ಕೂಗಿದರು.

ಆಗ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತ ತಲುಪಿತು. ವಾಹನ ತಡೆದ ಪ್ರತಿಭಟನಕಾರರು, ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ‘ದಲಿತರ ಹಕ್ಕನ್ನು ಕಿತ್ತುಕೊಂಡಿರುವ ರೇಣುಕಾಚಾರ್ಯ ಹಾಗೂ ದಾರಕೇಶ್ವರಯ್ಯ ಅವರನ್ನು ಬಂಧಿಸಬೇಕು’ ಎಂದು ಘೋಷಣೆ ಕೂಗಿದರು.

ಬಳಿಕ ಪೊಲೀಸರು ದಾರಕೇಶ್ವರಯ್ಯ ಅವರನ್ನು ಇನ್ನೊಂದು ವಾಹನದಲ್ಲಿ ಕರೆದುಕೊಂಡು ಹೋದರು. ಅರ್ಧ ಗಂಟೆಗೂ ಹೆಚ್ಚು ಹೊತ್ತು ದಾರಕೇಶ್ವರಯ್ಯ ಅವರು ಪೊಲೀಸ್‌ ವಾಹನದಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದರು.

ಪರಿಶಿಷ್ಟ ಮುಖಂಡರಾದ ಹೂವಿನಮಡು ಅಂಜಿನಪ್ಪ, ಕಬ್ಬಳ್ಳಿ ಮೈಲಪ್ಪ, ಹೆಗ್ಗೆರೆ ರಂಗಪ್ಪ, ಡಿ. ಹನುಮಂತಪ್ಪ, ಆಟೊ ತಿಮ್ಮಣ್ಣ, ನೇರ್ಲಗಿ ರಾಜೇಶ್‌, ಬಾಡಾ ಶ್ರೀನಿವಾಸ್‌ ಪ್ರತಿಭಟನೆಯಲ್ಲಿದ್ದರು.


‘ಹಿಂದೂ ಲಿಂಗಾಯತ’ದಿಂದ ಬೇಡ ಜಂಗಮ’ ಹೇಗಾಯಿತು?

ಹೊನ್ನಾಳಿ: ‘1966-67ರಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಶಾಲಾ ದಾಖಲಾತಿಗಳಲ್ಲಿ ಜಾತಿ ‘ಹಿಂದೂ ಲಿಂಗಾಯತ’ ಎಂದಿದೆ. 2013-14ರಲ್ಲಿ ‘ಬೇಡ ಜಂಗಮ’ (ಎಸ್ಸಿ) ಆಗಿ ಬದಲಾಗಿದೆ. ಯಾರು, ಏಕೆ ಈ ಬದಲಾವಣೆ ಮಾಡಿದರು’ ಎಂದು ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಎಸ್ಸಿ, ಎಸ್ಟಿ ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟ ಪ್ರಶ್ನಿಸಿದೆ.

ಒಕ್ಕೂಟದ ಮುಖಂಡ ಕೊಡತಾಳ್ ರುದ್ರೇಶ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ, ಇದಕ್ಕೆ ಪೂರಕವಾಗಿ ರೇಣುಕಾಚಾರ್ಯ ಅವರ ಶಾಲಾ ದಾಖಲಾತಿಗಳ ಪ್ರತಿಗಳನ್ನು ಮಾಧ್ಯಮದವರಿಗೆ ಅವರು ತೋರಿಸಿದರು.

‘ಶಾಲಾ ದಾಖಲಾತಿಯಲ್ಲಿ ಬೇಡ ಜಂಗಮ (ಎಸ್ಸಿ) ಎಂದು ಬರೆಸಿದ್ದರೂ ನನಗೇನೂ ಗೊತ್ತಿಲ್ಲ ಎಂದು ಹೇಳುವ ರೇಣುಕಾಚಾರ್ಯ ಅವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.