ADVERTISEMENT

ಖೋಟಾ ನೋಟು ಚಲಾವಣೆ ಆರೋಪ; ಮಾನವ ಹಕ್ಕುಗಳ ಕಾರ್ಯಕರ್ತ ಸೇರಿ ಇಬ್ಬರ ಬಂಧನ

₹ 1 ಕೋಟಿ ಮೌಲ್ಯದ ಖೋಟಾ ನೋಟು ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 13:47 IST
Last Updated 25 ಡಿಸೆಂಬರ್ 2018, 13:47 IST
ಬೆಳಗಾವಿಯಲ್ಲಿ ವಶಪಡಿಸಿಕೊಳ್ಳಲಾದ ಖೋಟಾ ನೋಟುಗಳನ್ನು ಡಿಸಿಪಿ ಸೀಮಾ ಲಾಟ್ಕರ್‌ ಪ್ರದರ್ಶಿಸಿದರು
ಬೆಳಗಾವಿಯಲ್ಲಿ ವಶಪಡಿಸಿಕೊಳ್ಳಲಾದ ಖೋಟಾ ನೋಟುಗಳನ್ನು ಡಿಸಿಪಿ ಸೀಮಾ ಲಾಟ್ಕರ್‌ ಪ್ರದರ್ಶಿಸಿದರು   

ಬೆಳಗಾವಿ: ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಬಡವರಿಗೆ ಉಚಿತ ಊಟ ನೀಡುತ್ತಿದ್ದ ಇಲ್ಲಿನ ಶ್ರೀನಗರದ ರಫೀಕ್‌ ದೇಸಾಯಿ ಎಂಬುವರನ್ನು ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸಿದ ಆರೋಪದಡಿ ನಗರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಸುಮಾರು ₹ 1 ಕೋಟಿ ಮೌಲ್ಯದ ಖೋಟಾ ನೋಟುಗಳನ್ನು ತಯಾರು ಮಾಡಿದ್ದ ನಗರದ ವಡಗಾಂವ ಪ್ರದೇಶದ ಆಶಿಫ್‌ ಶೇಖ್‌ ಅವರ ಜೊತೆಗೂಡಿ ನೋಟುಗಳನ್ನು ಚಲಾವಣೆ ಮಾಡಲು ರಫೀಕ್‌ ದೇಸಾಯಿ ಮುಂದಾಗಿದ್ದರು.

ಆಶಿಫ್‌ ಶೇಖ್‌ ದುಬೈನಲ್ಲಿ ಕೆಲವು ವರ್ಷಗಳ ಕಾಲ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸಿ, ನಗರಕ್ಕೆ ವಾಪಸ್‌ ಆಗಿದ್ದರು. ಕಂಪ್ಯೂಟರ್‌ನಲ್ಲಿ ಪರಿಣತಿ ಹೊಂದಿದ್ದ ಇವರು, ತನ್ನ ಮನೆಯಲ್ಲಿಯೇ ಲ್ಯಾಪ್‌ಟಾಪ್‌, ಕಲರ್‌ ಪ್ರಿಂಟರ್‌ಗಳನ್ನು ಇಟ್ಟುಕೊಂಡು ಖೋಟಾ ನೋಟುಗಳನ್ನು ತಯಾರು ಮಾಡಿದ್ದಾರೆ.

ADVERTISEMENT

ಸುಮಾರು 6 ತಿಂಗಳವರೆಗೆ ನಿರಂತರವಾಗಿ ಖೋಟಾ ನೋಟು ತಯಾರು ಮಾಡಲು ಪ್ರಯತ್ನಿಸಿದ್ದಾರೆ. ಆರಂಭದಲ್ಲಿ ₹ 50, ₹ 100 ಮುಖಬೆಲೆಯ ನೋಟುಗಳನ್ನು ತಯಾರಿಸಲು ಪ್ರಯತ್ನಿಸಿದ್ದಾರೆ. ನಿಜವಾದ ನೋಟುಗಳ ಬಣ್ಣ ಹಾಗೂ ವಿನ್ಯಾಸದ ಜೊತೆ ಇವು ತಾಳೆಯಾಗಲಿಲ್ಲ.

ಹೀಗಾಗಿ ₹ 2,000 ಹಾಗೂ ₹ 500 ಮುಖಬೆಲೆಯ ನೋಟುಗಳನ್ನು ತಯಾರಿಸಲು ಆರಂಭಿಸಿದರು. ಇವು ನಿಜವಾದ ನೋಟುಗಳ ಜೊತೆ ಬಹುತೇಕ ಹೋಲಿಕೆಯಾಗಿದ್ದರಿಂದ ಇವುಗಳನ್ನು ತಯಾರಿಸಿದರು ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

ಈ ನೋಟುಗಳನ್ನು ತಯಾರಿಸಿದ ನಂತರ ಆಶಿಫ್‌ ಅವರು ರಫೀಕ್‌ ದೇಸಾಯಿ ಜೊತೆಗೂಡಿ ಚಲಾವಣೆ ಮಾಡಲು ಹೊರಟಿದ್ದಾಗ ಪೊಲೀಸರು ಬಂಧಿಸಿದರು. ₹ 2,000 ಮುಖಬೆಲೆಯ 4,969 ನೋಟುಗಳು ಹಾಗೂ ₹ 500 ಮುಖಬೆಲೆಯ 195 ನೋಟುಗಳನ್ನು ವಶಕ್ಕೆ ಪಡೆದರು. ಇವುಗಳ ಒಟ್ಟು ಮೌಲ್ಯ ₹ 1,00,81,500.

‘ಎಸಿಪಿ ಮಹಾಂತೇಶ್ವರ ಜಿದ್ದಿ ಹಾಗೂ ಎಸಿಪಿ ನಾರಾಯಣ ಬರಮನಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ. ₹ 1 ಕೋಟಿಗೂ ಹೆಚ್ಚು ಖೋಟಾ ನೋಟುಗಳು ಸಿಕ್ಕರೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಬೇಕೆಂಬ ನಿಯಮವಿದೆ. ಅದರಂತೆ ಪ್ರಕರಣವನ್ನು ಶೀಘ್ರದಲ್ಲಿಯೇ ಸಿಐಡಿ ಹಸ್ತಾಂತರಿಸುತ್ತೇವೆ’ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಸೀಮಾ ಲಾಟ್ಕರ್‌, ಮಹಾನಿಂಗ ನಂದಗಾವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.