ಬೆಂಗಳೂರು: ‘ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸರ್ಕಾರದಿಂದ ಗೌರವಧನ ಪಡೆಯಲು ಯತ್ನಿಸುವ ನಕಲಿ ವ್ಯಕ್ತಿಗಳನ್ನು ಕಠಿಣ ರೀತಿಯಲ್ಲಿ ದಂಡಿಸಿ’ ಎಂದು ಆದೇಶ ಹೊರಡಿಸಿರುವ ಹೈಕೋರ್ಟ್, ‘ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವುದೇ ತೊಂದರೆ ಆಗಬಾರದು. ಆದರೆ, ಕೆಲವರು ನಕಲಿ ದಾಖಲೆ ಒದಗಿಸಿ ಗೌರವಧನಕ್ಕೆ ಹಕ್ಕು ಮಂಡಿಸುತ್ತಾರೆ. ಅಂತಹ ಪ್ರಕರಣಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು’ ಎಂದು ಆದೇಶಿಸಿದೆ.
‘ಸ್ವಾತಂತ್ರ್ಯ ಹೋರಾಟಗಾರ ಎಂದು ಹಲವು ವರ್ಷ ರಾಜ್ಯ ಸರ್ಕಾರದಿಂದ ಗೌರವಧನ ಪಡೆದ ಮುಳಬಾಗಿಲು ತಾಲ್ಲೂಕಿನ ಮಂಡಿಕಲ್ ಗ್ರಾಮದ 85 ವರ್ಷದ ಎಂ.ವಿ.ಶ್ರೀನಿವಾಸ ಗೌಡ ಅವರಿಂದ ಪುನಃ ಹಣ ವಸೂಲು ಮಾಡಬೇಕು’ ಎಂದು ಕೋಲಾರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಶ್ರೀನಿವಾಸ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಶ್ರೀನಿವಾಸ ಗೌಡ ಅವರ ರಿಟ್ (ಡಬ್ಲ್ಯು.ಪಿ 27154/2019) ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಅರ್ಜಿದಾರರು ಸ್ವಾತಂತ್ರ್ಯ ಹೋರಾಟದ ವೇಳೆ ಜೈಲು ಸೇರಿದ್ದಕ್ಕೆ, ಮನೆಯಿಂದ ಹೊರಗುಳಿದಿದ್ದಕ್ಕೆ ಹಾಗೂ ಆ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹಾಗಾಗಿ, ಸರ್ಕಾರದ ನಿಯಮಗಳ ಅನುಸಾರ ಅವರು ರಾಜ್ಯ ಸರ್ಕಾರದಿಂದ ಕೊಡಮಾಡುವ ಗೌರವ ಧನ ಪಡೆಯಲು ವಿಫಲವಾಗಿರುವುದು ದೃಢಪಟ್ಟಿದೆ’ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿಯಲ್ಲಿ ಏನಿತ್ತು?: ‘ನಾನು ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ರಾಜುಪೇಟೆ ಸತ್ಯಾಗ್ರಹ ಹಾಗೂ ಮೈಸೂರು ಚಲೋ ಚಳವಳಿಗಳಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದ್ದೇನೆ. ಸರ್ಕಾರದ ಆದೇಶದಂತೆ ದಾಖಲೆಗಳನ್ನು ಸಲ್ಲಿಸಿ 1981ರಿಂದ ಪ್ರತಿ ತಿಂಗಳೂ ರಾಜ್ಯ ಸರ್ಕಾರದ ಗೌರವ ಧನ ಪಡೆಯುತ್ತಿದ್ದೇನೆ. ಆದರೆ, ನನ್ನ ವಿರುದ್ಧ ಲೋಕಾಯುಕ್ತಕ್ಕೆ ನೀಡಲಾಗಿದ್ದ ಸುಳ್ಳು ದೂರು ಆಧರಿಸಿ ಗೌರವಧನ ವಾಪಸು ಪಡೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದು ಕಾನೂನು ಬಾಹಿರ’ ಎಂದು ಎಂ.ವಿ.ಶ್ರೀನಿವಾಸ ಗೌಡ ಆಕ್ಷೇಪಿಸಿದ್ದರು.
ಪ್ರಕರಣವೇನು?: ‘ಎಂ.ವಿ.ಶ್ರೀನಿವಾಸ ಗೌಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹಕ್ಕು ಮಂಡಿಸಿ ಗೌರವಧನ ಪಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿ ಮಂಡಿಕಲ್ ನಿವಾಸಿ ನಾಗರಾಜ್ 2015ರ ಆಗಸ್ಟ್ 1ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
‘ಲೋಕಾಯುಕ್ತ ತನಿಖೆ ದೃಢಪಟ್ಟಿದೆ’ ಎಂಬ ಆಧಾರದಲ್ಲಿ ಕೋಲಾರ ಜಿಲ್ಲಾಧಿಕಾರಿ 2018ರ ನವೆಂಬರ್ 14ರಂದು ಆದೇಶವೊಂದನ್ನು ಹೊರಡಿಸಿ, ‘ಎಂ.ವಿ.ಶ್ರೀನಿವಾಸಗೌಡ ಅವರಿಗೆ ಈತನಕ ನೀಡಲಾಗಿರುವ ಗೌರವಧನ ವಾಪಸು ಪಡೆಯುವ ಪ್ರಕ್ರಿಯೆ ಆರಂಭಿಸಿ’ ಎಂದು ಮುಳಬಾಗಿಲು ತಹಶೀಲ್ದಾರ್ ಅವರಿಗೆ ಆದೇಶಿಸಿದ್ದರು.
ಇದರ ಅನುಸಾರ ತಹಶೀಲ್ದಾರ್ 2019ರ ಮೇ 20ರಂದು ಅರ್ಜಿದಾರರಿಗೆ ನೋಟಿಸ್ ನೀಡಿ 2019ರ ಮೇ 30ರೊಳಗೆ ₹9,08,661 ಗೌರವ ಧನವನ್ನು ವಾಪಸು ನೀಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.