ADVERTISEMENT

ಪ್ರಮಾಣಪತ್ರಗಳು ನಕಲಿ: ಪಿಎಚ್‌ಡಿ ನೈಜತೆ ಪರಿಶೀಲನೆಗೆ ಎಸ್‌ಒಪಿ

ಯುಜಿಸಿ ಅರ್ಹತೆ ಕಡ್ಡಾಯ: ಹಲವು ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳು ನಕಲಿ

ಚಂದ್ರಹಾಸ ಹಿರೇಮಳಲಿ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
   

ಬೆಂಗಳೂರು: ಅತಿಥಿ ಉಪನ್ಯಾಸಕರು ಸಲ್ಲಿಸಿದ ಪಿಎಚ್‌.ಡಿ ಪ್ರಮಾಣಪತ್ರಗಳ ನೈಜತೆ ಪತ್ತೆ ಹಚ್ಚಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಅಳವಡಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದ್ದು, ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2025–26ನೇ ಸಾಲಿನ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ಗೆ ಯುಜಿಸಿ ಅರ್ಹತೆ ಪಡೆದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕಗೊಂಡ ಹಲವು ಅಭ್ಯರ್ಥಿಗಳು ನಕಲಿ ಪಿಎಚ್‌ಡಿ ‌ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ದೂರುಗಳು ಸಲ್ಲಿಕೆಯಾಗಿದ್ದವು.  

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಅಥವಾ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು, ಪಿಎಚ್‌ಡಿ ಪಡೆದಿರಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ರೂಪಿಸಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ ಯುಜಿಸಿ ಆದೇಶವನ್ನು ಎತ್ತಿಹಿಡಿದಿತ್ತು. ಹಾಗಾಗಿ, ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಇಲ್ಲದ ಸುಮಾರು ಆರು ಸಾವಿರ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು, ಅರ್ಹತೆ ಇರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು. 

ADVERTISEMENT

ರಾಜ್ಯದ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಶೈಕ್ಷಣಿಕ ದಾಖಲೆಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಪರಿಶೀಲಿಸಬೇಕು. ಸ್ನಾತಕೋತ್ತರ ಪದವಿಗಳ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಿಎಚ್‌ಡಿ, ಎಂ.ಫಿಲ್‌, ಕೆ–ಸೆಟ್‌, ಎನ್‌ಇಟಿಗಳ ನೈಜತೆಯನ್ನು ಅತಿಥಿ ಉಪನ್ಯಾಸಕರೇ ಸಾಬೀತು ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಕಾಲೇಜು ಶಿಕ್ಷಣ ಇಲಾಖೆ, ಎಲ್ಲ ಶೈಕ್ಷಣಿಕ ದಾಖಲೆಗಳ ನೈಜತಾ ಪ್ರಮಾಣಪತ್ರವನ್ನು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ ಒಂದು ಬಾರಿ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು.

ನೈಜತೆ ಪರಿಶೀಲನೆಯ ವೇಳೆ ಕೆಲ ಅಭ್ಯರ್ಥಿಗಳು ಪಡೆದ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿ ಎನ್ನುವುದು ದೃಢಪಟ್ಟಿತ್ತು. ಆದರೆ, ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳು ನೀಡಿದ ಹಲವು ನೈಜತೆ ಪ್ರಮಾಣಪತ್ರಗಳೂ ನಕಲಿ ಎನ್ನುವ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಸಲ್ಲಿಕೆಯಾದ ಎಲ್ಲ ಪ್ರಮಾಣಪತ್ರಗಳ ಪರಿಶೀಲನೆಗೆ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಅಳವಡಿಸಿಕೊಳ್ಳುತ್ತಿದೆ. ಅದಕ್ಕಾಗಿ ರಚಿಸಲಾಗುತ್ತಿರುವ ಸಮಿತಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನುರಿತ ಬೋಧಕ, ಬೋಧಕೇತರ ಸಿಬ್ಬಂದಿ ಇರಲಿದ್ದಾರೆ. ಆಯಾ ವಿಶ್ವವಿದ್ಯಾಲಯಗಳಿಗೇ ತೆರಳಿ ಅನುಮಾನ ಬಂದ ಪ್ರಮಾಣಪತ್ರಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ. 

ಪಿಎಚ್‌ಡಿ ಪ್ರಮಾಣಪತ್ರಗಳ ನೈಜತೆ ಪತ್ತೆ ಹಚ್ಚಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಅಳವಡಿಸಿಕೊಳ್ಳಲಾಗುತ್ತಿದ್ದು ಶೀಘ್ರ ಆದೇಶ ಹೊರಡಿಸಲಾಗುವುದು
ಎನ್‌.ಮಂಜುಶ್ರೀ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ
ಅತಿಥಿ ಉಪನ್ಯಾಸಕರ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಯ ಮಾದರಿಯಲ್ಲೇ ಕಾಯಂ ಪ್ರಾಧ್ಯಾಪಕರ ಪಿಎಚ್‌.ಡಿ ಪ್ರಮಾಣಪತ್ರಗಳನ್ನೂ ಪರಿಶೀಲನೆ ನಡೆಸಬೇಕು. ನಕಲಿ ಸಾಬೀತಾದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕು
ಅರುಣ್‌ ಹೊಸಕೊಪ್ಪ ಕಾರ್ಯದರ್ಶಿ ಸಂಸ್ಕೃತಿ ಎಜುಕೇಷನ್‌ ಟ್ರಸ್ಟ್‌

200ಕ್ಕೂ ಹೆಚ್ಚು ‘ಅತಿಥಿ’ಗಳ ರಾಜೀನಾಮೆ

ದಾಖಲೆಗಳ ಪರಿಶೀಲನೆಗೆ ಕಾಲೇಜು ಶಿಕ್ಷಣ ಇಲಾಖೆ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಅಳವಡಿಸಿಕೊಳ್ಳುವ ಮಾಹಿತಿ ಸಿಗುತ್ತಿದ್ದಂತೆ ಯುಜಿಸಿ ಅರ್ಹತೆ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಆಯ್ಕೆಯಾಗಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್‌.ಮಂಜುಶ್ರೀ ‘ಕೆಲ ಅತಿಥಿ ಉಪನ್ಯಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವಾಗ ವೈಯಕ್ತಿಕ ಕಾರಣಗಳನ್ನು ನಮೂದಿಸಿದ್ದಾರೆ. ಅವರು ಸಲ್ಲಿಸಿದ ಪ್ರಮಾಣ ಪತ್ರಗಳ ನೈಜತೆ ಪರೀಶೀಲನೆಯ ನಂತರವೇ ನಿಜವಾದ ಕಾರಣ ಗೊತ್ತಾಗುತ್ತದೆ’ ಎಂದರು.

ಕಾಯಂ ಅಧ್ಯಾಪಕರ ಪಿಎಚ್‌ಡಿಗಳೂ ನಕಲಿ

ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಅಧ್ಯಾಪಕರು ಸಲ್ಲಿಸಿರುವ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿಯಾಗಿವೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲ ಅಧ್ಯಾಪಕರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2008–09ರಲ್ಲಿ ನೇಮಕಾತಿ ನಡೆದಾಗ ಎಂ.ಫಿಎಲ್‌ ಅರ್ಹತೆ ಇರುವವರಿಗೂ ಅವಕಾಶ ನೀಡಲಾಗಿತ್ತು. ಹಲವು ಅಭ್ಯರ್ಥಿಗಳು ರಾತ್ರೋರಾತ್ರಿ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ಪ್ರಮಾಣಪತ್ರಗಳನ್ನು ತಂದು ನೇಮಕವಾಗಿದ್ದರು. ಅಂತಹ ಅಭ್ಯರ್ಥಿಗಳ ವಿರುದ್ಧ ಇಂದಿಗೂ ಕ್ರಮ ಕೈಗೊಂಡಿಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗವು ಪಿಎಚ್‌ಡಿ ಪಡೆದವರಿಗೆ ಮೂರು ವೇತನ ಬಡ್ತಿ ನೀಡಬೇಕು. ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡುವಾಗ ಕಡ್ಡಾಯವಾಗಿ ಪಿಎಚ್‌ಡಿ ಪರಿಗಣಿಸಬೇಕು ಎಂದು ನಿಯಮ ರೂಪಿಸಿದ ನಂತರ ನಕಲಿ ಪಿಎಚ್‌ಡಿ ಹಾವಳಿ ಮಿತಿಮೀರಿದೆ. ಬಹಳಷ್ಟು ಅಧ್ಯಾಪಕರು ಹೊರ ರಾಜ್ಯಗಳಿಂದ ಪಡೆದ ನಕಲಿ ‍ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮೇಘಾಲಯದ ಸಿಎಂಜೆ ವಿಶ್ವವಿದ್ಯಾಲಯ ನೀಡಿದ ಪಿಎಚ್‌ಡಿಗಳು ನಕಲಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕರ್ನಾಟಕದಲ್ಲಿ ತನ್ನ ಯಾವ ದೂರಶಿಕ್ಷಣ ಕೇಂದ್ರವೂ ಇಲ್ಲ ಎಂದು ಬಿಹಾರದ ಮಗಧ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದೆ. ಈ ಎರಡೂ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪ್ರಮಾಣಪತ್ರವನ್ನು ಸಲ್ಲಿಸಿದ 300ಕ್ಕೂ ಹೆಚ್ಚು ಅಧ್ಯಾಪಕರು ಇದ್ದಾರೆ. ಅವರ ವಿರುದ್ಧ ಇದುವರೆಗೂ ಕ್ರಮ ಆಗಿಲ್ಲ. ನಕಲಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸದೆ ಶೇ 10ರಷ್ಟು ಅಧ್ಯಾಪಕರಿಗೆ ಪದೋನ್ನತಿ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಮಾಡಲಾಗಿದೆ. ಲೋಕಾಯುಕ್ತದಲ್ಲಿ ದೂರು ದಾಖಲಾದ ಇಬ್ಬರ ವಿರುದ್ಧ ಅಷ್ಟೇ ಕಾಲೇಜು ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ ಎಂದು ದೂರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.