ADVERTISEMENT

ತರಕಾರಿ, ಆಹಾರ ಧಾನ್ಯ, ಅಡುಗೆ ಅನಿಲ: ಅಡುಗೆ ಮನೆಗೆ ಬೆಲೆ ಏರಿಕೆ ಬಿಸಿ

ಎಸ್.ರವಿಪ್ರಕಾಶ್
Published 12 ಅಕ್ಟೋಬರ್ 2021, 20:19 IST
Last Updated 12 ಅಕ್ಟೋಬರ್ 2021, 20:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪ್ರತಿ ತಿಂಗಳ ಕೊನೆಯಲ್ಲಿ ಮನೆಯಲ್ಲಿ ಆಹಾರ ಧಾನ್ಯಗಳ ಡಬ್ಬಿ ಖಾಲಿ ಖಾಲಿ. ಬಾಡಿದ, ಮುರುಟಿದ ತರಕಾರಿಗಳನ್ನು ಇಟ್ಟುಕೊಂಡೇ ‘ಜಿಪುಣ’ತನದಿಂದ ಅಡುಗೆ ಬೇಯಿಸಬೇಕು. ಗ್ಯಾಸ್‌ ಸ್ಟೌ ಉರಿಸುವಾಗಲೂ ಯೋಚಿಸಬೇಕು. ಜೇಬೂ ಖಾಲಿ ಎಂಬ ಸ್ಥಿತಿಗೆ ಬಡ– ಮಧ್ಯಮ ವರ್ಗ ತಲುಪಿದೆ. ಅಡುಗೆ ಮನೆಗೆ ಬೆಲೆ ಏರಿಕೆಯ ‘ಬೆಂಕಿ’ ಬಿದ್ದಿದೆ!

ಕೋವಿಡ್‌ ಎರಡನೇ ಅಲೆಯ ಅಬ್ಬರ ಕಡಿಮೆ ಆಗಿದ್ದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೃಷ್ಟಿಸಿರುವ ತಲ್ಲಣದಿಂದ ಮನೆ– ಮನೆಗಳಲ್ಲಿ ದೈನಂದಿನ ಖರ್ಚು– ವೆಚ್ಚ ದುಬಾರಿಯಾಗಿದೆ. ತರಕಾರಿ, ದಿನಸಿ, ಅಡುಗೆ ಅನಿಲ, ಪೆಟ್ರೋಲ್/ ಡೀಸೆಲ್‌, ಖಾದ್ಯ ತೈಲಗಳ ಬೆಲೆ ಏರಿಕೆ ಗ್ರಾಹಕರ ಜೇಬು ಸುಡಲಾರಂಭಿಸಿದೆ. ಒಂದು ಕಡೆ ಮನೆ ಒಡೆಯನ ಆದಾಯ ಕುಸಿದಿದ್ದರೆ, ಇನ್ನೊಂದೆಡೆ ಖರ್ಚು ವಿಪರೀತ ಏರಿಕೆಯಾಗಿದೆ.

ಅಡುಗೆ ಅನಿಲ ಮತ್ತು ಪೆಟ್ರೋಲ್‌ ಬೆಲೆ ರಾಕೆಟ್‌ನಂತೆ ಗಗನಮುಖಿಯಾಗಿದ್ದರೆ, ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ಬಹಳ ಕಡೆ ತರಕಾರಿ ಬೆಳೆಗಳು ನಾಶವಾಗಿವೆ. ಇದರಿಂದ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಟೊಮೆಟೊ ₹ 80, ಆಲೂಗಡ್ಡೆ ₹ 70, ಈರುಳ್ಳಿ ₹ 50, ನುಗ್ಗೆಕಾಯಿ ₹ 100ರಿಂದ ₹ 130, ಕ್ಯಾರೆಟ್ ₹ 80, ಬೀನ್ಸ್ ₹ 70 (ಪ್ರತಿ ಕಿ.ಲೋಗೆ) ಹೀಗೆ ಲಂಗು ಲಗಾಮು ಇಲ್ಲದೆ ಏರುತ್ತಿವೆ.

ADVERTISEMENT

ಪೆಟ್ರೋಲ್‌ ದರ (ಪ್ರತಿ ಲೀಟರ್‌ಗೆ) ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಭಿನ್ನವಾಗಿದ್ದು, ₹106 ರಿಂದ ₹110 ರವರೆಗಿದೆ. ಡೀಸೆಲ್‌ ದರ ₹ 100ರ ಗಡಿ ದಾಟಿದೆ. 14.2 ಕೆ.ಜಿ ಅಡುಗೆ ಅನಿಲದ ಸಿಲಿಂಡರ್‌ ಬೆಲೆ ₹ 900ರಿಂದ ಸಾವಿರದತ್ತ ದಾಪುಗಾಲಿಡುತ್ತಿದೆ. ಖಾದ್ಯ ತೈಲದ ಬೆಲೆ ಕೂಡಾ ಪ್ರತಿ ಲೀಟರ್‌ಗೆ ₹150 ರಿಂದ ₹200 ರ ಆಸುಪಾಸಿನಲ್ಲಿದೆ.

ಇವೆಲ್ಲದರ ಪರಿಣಾಮ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ತಿಂಗಳ ‘ಬಜೆಟ್‌’ ಏರುಪೇರಾಗಿದೆ. ದುಡಿಮೆ ಮಾಡುವವನ ಆದಾಯ ಕಡಿಮೆ ಆಗಿದ್ದು, ಖರ್ಚು ಮಾತ್ರ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ.

ಐವರು ಸದಸ್ಯರನ್ನು ಒಳಗೊಂಡ ಸಣ್ಣ ಕುಟುಂಬ ಕೆಲವು ತಿಂಗಳ ಹಿಂದೆ ದಿನಸಿಗಾಗಿ ₹ 5,000 ದಿಂದ ₹ 6000 ಖರ್ಚು ಮಾಡುತ್ತಿತ್ತು. ಈಗ ₹ 8,000 ಕ್ಕೆ ಏರಿಕೆ ಆಗಿದೆ. ತರಕಾರಿಗಳಿಗಾಗಿ ತಿಂಗಳಿಗೆ ₹ 2,000 ದಿಂದ ₹ 2,500 ಬೇಕಾಗುತ್ತಿತ್ತು. ಆ ಪ್ರಮಾಣ ಈಗ ₹ 3,000 ಕ್ಕೆ ತಲುಪಿದೆ. ಇದಲ್ಲದೇ ಇನ್ನೂ ಹಲವು ಅಗತ್ಯ ವಸ್ತುಗಳು, ಸೇವೆಗಳ ವೆಚ್ಚವೂ ದುಬಾರಿಯಾಗಿದೆ.

ಕೋವಿಡ್‌ ಪೂರ್ವಕ್ಕೂ ಈಗಿಗೂ ತಿಂಗಳ ಖರ್ಚಿನಲ್ಲಿ ಕನಿಷ್ಠ ₹ 5,000ದಷ್ಟು ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ತಿಂಗಳಿಗೆ ಸುಮಾರು ₹ 50,000 ರಿಂದ ₹70,000 ಸಾವಿರ ಆದಾಯ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಮನೆ ಬಾಡಿಗೆ ಸೇರಿ ಸುಮಾರು ₹ 40,000 ಖರ್ಚು ಬರುತ್ತಿದೆ.ಅಲ್ಲದೆ, ನಗರಗಳಲ್ಲಿ ವಾರಾಂತ್ಯದಲ್ಲಿ ಹೊಟೇಲ್‌ಗೆ ಊಟಕ್ಕೆ ಹೋಗುವ ವಾಡಿಕೆ ಇದ್ದು, ಅಲ್ಲಿಯೂ ಕಾಫಿ, ಟೀ, ತಿಂಡಿ ಬೆಲೆಯೂ ಶೇ 40 ರಿಂದ ಶೇ 50 ರಷ್ಟು ಹೆಚ್ಚಾಗಿದೆ.

₹50,000 ಕ್ಕಿಂತ ಕಡಿಮೆ ಆದಾಯದವರ ಸ್ಥಿತಿಯೂ ತೀರಾ ಗಂಭೀರ, ಕುಟುಂಬದ ‘ಬಜೆಟ್‌’ ಮೀರಿ ಸಾಲ ಮಾಡಿ ಬದುಕು ಸಾಗಿಸ
ಬೇಕಾಗಿದೆ. ಮನೆ ಬಾಡಿಗೆ,ಮಕ್ಕಳ ಶಾಲಾ ಶುಲ್ಕಕ್ಕೂ ಅವರಿವರನ್ನು ಕೇಳಬೇಕಾಗಿದೆ.

ರಾಜ್ಯದಲ್ಲಿ ತರಕಾರಿ ಗಗನಮುಖಿ:

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತರಕಾರಿ ದರಗಳು ದಿಢೀರ್‌ ಏರಿಕೆ ಕಂಡಿವೆ. ಟೊಮೆಟೊಗೆ ಭಾರಿ ಬೇಡಿಕೆ ಸೃಷ್ಟಿಯಾಗಿರುವುದರಿಂದ ಅದರ ಬೆಲೆ ₹ 80 ಕ್ಕೆ ಏರಿದೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಡಗರವನ್ನು ಬೆಲೆ ಏರಿಕೆ ತಗ್ಗಿಸಿದೆ.

ಮುಂಗಾರು ಹಾಗೂ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದು ತಿಂಗಳಿನಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತರಕಾರಿ ಮತ್ತು ಸೊಪ್ಪಿನ ಬೆಳೆಗಳು ತೀವ್ರ ಹಾನಿಗೆ ತುತ್ತಾಗಿವೆ. ಇದರಿಂದ ತರಕಾರಿ, ಸೊಪ್ಪಿನ ದರಗಳೆಲ್ಲ ಏರಿವೆ.

ಆರು ತಿಂಗಳಿನಿಂದ ಪ್ರತಿ ಕೆ.ಜಿಗೆ ₹15 ರ ಆಸುಪಾಸಿನಲ್ಲಿದ್ದ ಟೊಮೊಟೊ ದರ ಕಳೆದ ವಾರ ₹30ಕ್ಕೆ ಏರಿತ್ತು. ಒಂದು ವಾರದಿಂದ ನಿರಂತರವಾಗಿ ಏರಿಕೆ ಕಂಡಿರುವ ಟೊಮೊಟೊ ಸಗಟು ದರ ಪ್ರತಿ ಕೆ.ಜಿಗೆ ₹60 ರಂತೆ ಹಾಗೂ ಚಿಲ್ಲರೆ ದರ ₹70 ರಿಂದ ₹80 ಕ್ಕೆ ತಲುಪಿದೆ.

ಟೊಮೆಟೊ, ಕ್ಯಾರೆಟ್, ಬೀನ್ಸ್‌, ಈರುಳ್ಳಿ, ಆಲೂಗಡ್ಡೆ, ನುಗ್ಗೇಕಾಯಿ ಬೆಂಡೆಕಾಯಿ, ಬಟಾಣಿ, ಮೆಂತ್ಯೆ, ಪಾಲಕ್, ಕೊತ್ತಂಬರಿ ಸೇರಿದಂತೆ ಎಲ್ಲ ಸೊಪ್ಪಿನ ದರಗಳಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ.

ಪ್ರತಿ ತರಕಾರಿ ದರ ₹10ರಷ್ಟು ಏರಿಕೆ: ‘ಒಂದು ವಾರದ ಹಿಂದೆ ತರಕಾರಿ ದರಗಳು ರಾಜ್ಯದಾದ್ಯಂತ ಸ್ಥಿರವಾಗಿದ್ದವು. ಮಳೆಯಿಂದಾಗಿ ಈಗ ಎಲ್ಲ ತರಕಾರಿಗಳ ಬೆಲೆ ಪ್ರತಿ ಕೆ.ಜಿ.ಗೆ ಹೆಚ್ಚುವರಿಯಾಗಿ ₹10ರಿಂದ ಗರಿಷ್ಠ ₹20ರವರೆಗೆ ಏರಿಕೆ ಕಂಡಿವೆ. ಕನಿಷ್ಠ ಒಂದು ತಿಂಗಳವರೆಗೆ ಇದೇ ರೀತಿ ಬೆಲೆ ಏರುವ ಸಾಧ್ಯತೆ ಇದೆ’ ಎಂದು ದಾಸನಪುರ ಎಪಿಎಂಪಿ ಪ್ರಾಂಗಣದ ಶ್ರೀಕೆಂಪೇಗೌಡ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಎಂ.ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.