ADVERTISEMENT

ಕುಟುಂಬಕ್ಕೊಂದು ವಿಶಿಷ್ಟ ಸಂಖ್ಯೆ: ಮಸೂದೆ ಮಂಡನೆಗೆ ಸಿದ್ಧತೆ

ಫಲಾನುವಿಗಳಿಗೆ ಸೌಲತ್ತು ತಲುಪಿಸಲು ಸಂಖ್ಯೆಯೇ ಆಧಾರ

ಚಂದ್ರಹಾಸ ಹಿರೇಮಳಲಿ
ಜಯಸಿಂಹ ಆರ್.
Published 11 ಡಿಸೆಂಬರ್ 2025, 0:47 IST
Last Updated 11 ಡಿಸೆಂಬರ್ 2025, 0:47 IST
   

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ಪ್ರತಿ ಕುಟುಂಬಕ್ಕೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ ‘ಕುಟುಂಬ ಸಂಖ್ಯೆ’ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಮುಂದಾಗಿದೆ.

ಇದರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಮಸೂದೆ ಸಿದ್ಧಪಡಿಸಿದೆ. ಸರ್ಕಾರದ ಎಲ್ಲ ಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ಈ ಸಂಖ್ಯೆ ಆಧರಿಸಿಯೇ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ.

‘ಕರ್ನಾಟಕ ಕುಟುಂಬ (ಪ್ರವೇಶ ಮತ್ತು ನಿರ್ವಹಣೆ) ಮಸೂದೆ-2025’ ಅನ್ನು ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ. ರಾಜ್ಯದ ಕುಟುಂಬಗಳಿಗೆ ಸರ್ಕಾರದ ಯಾವುದೇ ಕಲ್ಯಾಣ ಕಾರ್ಯಕ್ರಮ, ಸವಲತ್ತು, ಸಹಾಯಧನ, ಪ್ರಮಾಣಪತ್ರ, ಪರವಾನಗಿ, ವಿಕೋಪ ನಿರ್ವಹಣೆ, ಎಲ್ಲ ಈ ರೀತಿಯ ಪರಿಹಾರಗಳನ್ನು ಈ ಕುಟುಂಬ ಸಂಖ್ಯೆಯ ಆಧಾರದಲ್ಲಿಯೇ ನೀಡುವ ಅಧಿಕಾರ ಸರ್ಕಾರಕ್ಕೆ ದತ್ತವಾಗಲಿದೆ.

ADVERTISEMENT

ಈ ವ್ಯವಸ್ಥೆ ನಿರ್ವಹಣೆಗಾಗಿ ಸರ್ಕಾರವು ‘ಕರ್ನಾಟಕ ಕುಟುಂಬ (ಪ್ರವೇಶ ಮತ್ತು ನಿರ್ವಹಣೆ) ಪ್ರಾಧಿಕಾರ’ ಸ್ಥಾಪಿಸಲಿದೆ. ಪ್ರಾಧಿಕಾರವು ರೂಪಿಸಲಿರುವ ‘ಕುಟುಂಬ ತಂತ್ರಾಂಶ ವ್ಯವಸ್ಥೆ’ಯ ಮೂಲಕ ರಾಜ್ಯದ ಪ್ರತಿ ಕುಟುಂಬವು ತನ್ನ ವಿವರಗಳನ್ನು ನಮೂದಿಸಿ, ಕುಟುಂಬ ಸಂಖ್ಯೆ ಪಡೆಯಬಹುದು. ಜನರು ನೀಡುವ ದತ್ತಾಂಶ ಮತ್ತು ವಿವರಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಬಳಿ ಇರುವ ದತ್ತಾಂಶಗಳೊಂದಿಗೆ ಹೋಲಿಸುವ ಹಾಗೂ ಮನೆ-ಮನೆಗೆ ಭೇಟಿ ನೀಡಿ, ಖಚಿತಪಡಿಸಿಕೊಳ್ಳುವ ಅಧಿಕಾರವು ಈ ಪ್ರಾಧಿಕಾರಕ್ಕೆ ಇರಲಿದೆ.

ಸಾಮಾಜಿಕ ನೋಂದಣಿ: ಪ್ರಾಧಿಕಾರವು ಜನರಿಂದ, ವಿವಿಧ ಇಲಾಖೆ ಮತ್ತು ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಬಳಸಿಕೊಂಡು ‘ಸಾಮಾಜಿಕ ನೋಂದಣಿ’ಯನ್ನು ಸಿದ್ಧಪಡಿಸಲಿದೆ. ರಾಜ್ಯ ಸರ್ಕಾರವು ತನ್ನ ಭಿನ್ನ ಕಾರ್ಯಕ್ರಮಕ್ಕಾಗಿ ಈ ನೋಂದಣಿಯನ್ನು ಬಳಸಿಕೊಳ್ಳಬಹುದಾಗಿದೆ. ಈ ನೋಂದಣಿಯ ದತ್ತಾಂಶಗಳನ್ನು ಪಡೆದುಕೊಳ್ಳಲು ಇತರ ಇಲಾಖೆಗಳು ಪ್ರಾಧಿಕಾರಕ್ಕೆ ಪತ್ರ ಬರೆಯಬೇಕಿದ್ದು, ದತ್ತಾಂಶ ಏಕೆ ಅಗತ್ಯ, ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹೀಗಿದ್ದೂ, ದತ್ತಾಂಶವನ್ನು ಒದಗಿಸುವ ಅಥವಾ ನಿರಾಕರಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರಲಿದೆ.

ಈ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾದ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಸವಲತ್ತುಗಳನ್ನು ಕುಟುಂಬ ಸಂಖ್ಯೆಯ ಮೂಲಕವೇ ವಿತರಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಸಂಚಿತ ನಿಧಿ ಮತ್ತು ಕೇಂದ್ರ ಸರ್ಕಾರದ ಸಂಚಿತ ನಿಧಿಯಿಂದ ಸಂದಾಯವಾಗುವ ಪೂರ್ಣ ಅಥವಾ ಅರೆ ಪ್ರಮಾಣದ ಸಹಾಯಧನ, ಆರ್ಥಿಕ ನೆರವು, ಪರಿಹಾರಗಳು ಸಂದಾಯವಾಗುವುದಿದ್ದರೆ, ಅದಕ್ಕೆ ಕುಟುಂಬ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಲಿದೆ. ರಾಜ್ಯ ಸರ್ಕಾರವು ಘೋಷಿಸುವ ಯಾವುದೇ ಕಲ್ಯಾಣ ಕಾರ್ಯಕ್ರಮ ಅಥವಾ ನೆರವುಗಳ ಫಲಗಳೂ ಈ ಸಂಖ್ಯೆಯ ಮೂಲಕವೇ ಫಲಾನುಭವಿಗಳಿಗೆ ತಲುಪಲಿದೆ.

ದತ್ತಾಂಶ ಸುರಕ್ಷತೆಗೆ ಒತ್ತು

  • ಒಂದು ಕುಟುಂಬಕ್ಕೆ ಒಂದೇ ಸಂಖ್ಯೆ. ಕುಟುಂಬದ ಸರ್ವ ಸದಸ್ಯರ ವಿವರ ಆ ಸಂಖ್ಯೆಯೊಂದಿಗೆ ಜೋಡಣೆಯಾಗಿರಲಿದೆ. ಕುಟುಂಬದ ಸದಸ್ಯರು ವೈಯಕ್ತಿಕ ದೃಢೀಕರಣದ ನಂತರ ವಿವರಗಳನ್ನು ಪರಿಷ್ಕರಿಸಬಹುದಾಗಿದೆ. ಆದರೆ ಪ್ರಾಧಿಕಾರವು ಹಲವು ಹಂತದ ಪರಿಶೀಲನೆಯ ನಂತರವಷ್ಟೇ ಪರಿಷ್ಕೃತ ವಿವರಗಳು ಅಧಿಕೃತವಾಗಲಿವೆ

  • ಕುಟುಂಬ ಸಂಖ್ಯೆಯನ್ನಷ್ಟೇ ಇಲಾಖೆಗಳಿಗೆ ಒದಗಿಸಲಾಗುತ್ತದೆ. ವೈಯಕ್ತಿಕ ವಿವರಗಳು ಅವುಗಳೊಂದಿಗೆ ಇರುವುದಿಲ್ಲ. ನಾಗರಿಕರ ಖಾಸಗಿ ವಿವರಗಳ ಗೌಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಷರತ್ತು ರೂಪಿಸಲಾಗಿದೆ

  • ಕುಟುಂಬ ಸಂಖ್ಯೆ ಮತ್ತು ಕುಟುಂಬಗಳ ವಿವರಗಳನ್ನು ಸಾರ್ವಜನಿಕ ವಾಗಿ ಪ್ರದರ್ಶಿಸಲು ಅಥವಾ ಲಭ್ಯವಿರುವಂತೆ ಮಾಡುವಂತಿಲ್ಲ. ನ್ಯಾಯಾಲಯಗಳ ಆದೇಶದ ಮೇರೆಗಷ್ಟೇ ವಿವರ ಸಾರ್ವಜನಿಕವಾಗಿ ಬಹಿರಂಗಪಡಿಸಬಹುದಾಗಿದೆ. ರಾಜ್ಯ ಸರ್ಕಾರದ ಯಾವುದಾದರೂ ಕಾನೂನಿನ ಪ್ರಕಾರ ಈ ವಿವರಗಳನ್ನು ನೀಡುವುದು ಕಡ್ಡಾಯವಾದ ಸಂದರ್ಭದಲ್ಲಿ ಮಾತ್ರ, ಬಹಿರಂಗಪಡಿಸಬಹುದಾಗಿದೆ

  • ವಿವಿಧ ಇಲಾಖೆಗಳಿಗೆ ನೀಡಿರುವ ಕುಟುಂಬ ಸಂಖ್ಯೆಯ ವಿವರಗಳು, ಸೀಮಿತ ಅವಧಿಯವರೆಗೆ ಮಾತ್ರ ಆ ಇಲಾಖೆಗಳಿಗೆ ಲಭ್ಯವಿರಲಿದೆ. ಆ ಅವಧಿ ಮುಗಿದ ನಂತರ ಇಲಾಖೆಗಳಿಗೆ ನೀಡಲಾಗಿದ್ದ ಕುಟುಂಬ ತಂತ್ರಾಂಶದ ಆಕ್ಸೆಸ್‌ ಸ್ಥಗಿತವಾಗಲಿದೆ

  • ಕುಟುಂಬ ಸಂಖ್ಯೆ ಮತ್ತು ವಿವರಗಳನ್ನು ದುರುಪಯೋಗ ಮಾಡಿಕೊಳ್ಳುವವರಿಗೆ ಮೂರು ವರ್ಷಗಳ
    ವರೆಗೆ ಜೈಲು ಅಥವಾ ₹55,000ದಿಂದ ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ

ಕುಟುಂಬ ತಂತ್ರಾಂಶ

ಕುಟುಂಬ ತಂತ್ರಾಂಶವು ಈ ಕೆಳಕಂಡ ಉಪ ವ್ಯವಸ್ಥೆಗಳನ್ನು ಒಳಗೊಂಡ ಒಂದು ಸಮಗ್ರ ವ್ಯವಸ್ಥೆಯಾಗಿದೆ.

1. ಸಾಮಾಜಿಕ ನೋಂದಣಿ

2. ಸಂಯೋಜಿತ ಫಲಾನುಭವಿಗಳ ನಿರ್ವಹಣಾ ವ್ಯವಸ್ಥೆ

3. ಫಲಾನುಭವಿಗಳ ನೋಂದಣಿ

4. ಪಾವತಿ ವ್ಯವಸ್ಥೆ

5. ಕುಂದುಕೊರತೆ ಪರಿಹಾರ ವೇದಿಕೆ

ಸಾಮಾಜಿಕ ನೋಂದಣಿ

ಪ್ರಾಧಿಕಾರವು ಜನರಿಂದ, ವಿವಿಧ ಇಲಾಖೆ ಮತ್ತು ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಬಳಸಿಕೊಂಡು ‘ಸಾಮಾಜಿಕ ನೋಂದಣಿ’ಯನ್ನು ಸಿದ್ಧಪಡಿಸಲಿದೆ. ರಾಜ್ಯ ಸರ್ಕಾರವು ತನ್ನ ಬೇರೆ–ಬೇರೆ ಕಾರ್ಯಕ್ರಮಗಳಿಗಾಗಿ ಈ ನೋಂದಣಿಯನ್ನು ಬಳಸಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳೂ ಈ ನೋಂದಣಿ ಮತ್ತು ಕುಟುಂಬ ಸಂಖ್ಯೆ ದತ್ತಾಂಶಗಳನ್ನು ಬಳಸಿ
ಕೊಳ್ಳಬಹುದಾಗಿದೆ. ಈ ನೋಂದಣಿಯ ದತ್ತಾಂಶಗಳನ್ನು ಪಡೆದುಕೊಳ್ಳಲು ಇತರ ಇಲಾಖೆಗಳು ಪ್ರಾಧಿಕಾರಕ್ಕೆ ಪತ್ರ ಬರೆಯಬೇಕಿದ್ದು, ದತ್ತಾಂಶ ಏಕೆ ಅಗತ್ಯ, ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲೇ ಬೇಕು. ಹೀಗಿದ್ದೂ, ದತ್ತಾಂಶವನ್ನು ಒದಗಿಸುವ ಅಥವಾ ನಿರಾಕರಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರಲಿದೆ.

ಈ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಾದ ನಂತರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಕಲ್ಯಾಣ ಕಾರ್ಯಕ್ರಮಗಳ ಸವಲತ್ತುಗಳನ್ನು ಕುಟುಂಬ ಸಂಖ್ಯೆಯ ಮೂಲಕವೇ ವಿತರಣೆ ಮಾಡಲಾಗುತ್ತದೆ.

ರಾಜ್ಯ ಸರ್ಕಾರದ ಸಂಚಿತ ನಿಧಿ ಮತ್ತು ಕೇಂದ್ರ ಸರ್ಕಾರದ ಸಂಚಿತ ನಿಧಿಯಿಂದ ಸಂದಾಯವಾಗುವ ಪೂರ್ಣ ಅಥವಾ ಅರೆ ಪ್ರಮಾಣದ ಸಹಾಯಧನ, ಆರ್ಥಿಕ ನೆರವು, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನೀಡಲಾಗುವ ಪರಿಹಾರಗಳು ಸಂದಾಯವಾಗುವುದಿದ್ದರೆ, ಅದಕ್ಕೆ ಕುಟುಂಬ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಲಿದೆ. ರಾಜ್ಯ ಸರ್ಕಾರವು ಘೋಷಿಸುವ ಯಾವುದೇ ಕಲ್ಯಾಣ ಕಾರ್ಯಕ್ರಮ ಅಥವಾ ನೆರವುಗಳ ಫಲಗಳೂ ಈ ಸಂಖ್ಯೆಯ ಮೂಲಕವೇ ಫಲಾನುಭವಿಗಳಿಗೆ ತಲುಪಲಿದೆ.

ಸರ್ಕಾರದ ಸವಲತ್ತುಗಳನ್ನು ನೀಡುವುದಷ್ಟೇ ಅಲ್ಲದೆ, ಪ್ರಾಕೃತಿಕ ವಿಕೋಪ, ವಿವಿಧ ಕಾರ್ಯಕ್ರಮಗಳಿಗಾಗಿ ನಾಗರಿಕರ ಮಾಹಿತಿ ಸಂಗ್ರಹಿಸವ ಅಗತ್ಯವಿದ್ದರೆ ಕುಟುಂಬ ತಂತ್ರಾಂಶದ ಮೂಲಕವೇ ಆ ಮಾಹಿತಿ ಪಡೆದುಕೊಳ್ಳಲು ಅವಕಾಶವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.