ರೈತ ವಿರೋಧಿ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು
ಬೆಂಗಳೂರು: ‘ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಬೇಕು’ ಎಂಬ ಬೇಡಿಕೆಗಳನ್ನು ರೈತ ಸಂಘಟನೆಗಳ ಪ್ರಮುಖರು ಮಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸೋಮವಾರ ನಡೆದ ರೈತ ಸಂಘಟನೆಗಳ ಪ್ರಮುಖರ ಜತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಕಾಂಗ್ರೆಸ್‌ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ರೈತ ಸಂಘಟನೆ ಪ್ರಮುಖ ಕೋಡಿಹಳ್ಳಿ ಚಂದ್ರಶೇಖರ್, ಸಿದಗೌಡ ಮೋದಗಿ ಮೊದಲಾದವರು ಭಾಗವಹಿಸಿದ್ದರು.
‘ವಿದ್ಯುತ್ ಪಂಪ್‌ಸೆಟ್‌ಗಳ ಅಕ್ರಮ– ಸಕ್ರಮ ಯೋಜನೆಯಡಿಯಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇದ್ದು, ತಕ್ಷಣವೆ ತಂತಿ, ಕಂಬ, ಟಿಸಿಗಳನ್ನು ಕೊಡಿಸಬೇಕು, ಕಬ್ಬಿನ ಬಾಕಿ ಹಣವನ್ನು ತಕ್ಷಣ ಕೊಡಬೇಕು’ ಎಂದೂ ರೈತ ನಾಯಕರು ಆಗ್ರಹಿಸಿದರು.
‘ರೈತರು ಮತ್ತು ಸರ್ಕಾರ ಸೇರಿ ತಲಾ ಶೇ 50ರಷ್ಟು ಹಣದೊಂದಿಗೆ ವಿಮೆ ಕಂಪನಿಗಳ ಜೊತೆ ಚರ್ಚಿಸಿ ಜಾನುವಾರು ವಿಮೆ ಜಾರಿ ಮಾಡಬೇಕು. ರೈತರು ಆಕಸ್ಮಿಕ ಮರಣ ಹೊಂದಿದರೆ ನೀಡುವ ಪರಿಹಾರಧನವನ್ನು ₹ 3 ಲಕ್ಷಕ್ಕೆ ಹೆಚ್ಚಿಸಬೇಕು, ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು’ ಎಂದೂ ಆಗ್ರಹಿಸಿದರು.
‘ವಾಣಿವಿಲಾಸ ಸಾಗರ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ತಕ್ಷಣ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿದ ಬಳಿಕ ಬಳಕೆ ಮಾಡದೆ ಉಳಿದಿರುವ ಜಮೀನುಗಳನ್ನು ರೈತರಿಗೆ ವಾಪಸ್ ನೀಡಬೇಕು, ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಬಾರದು’ ಎಂದೂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.