ADVERTISEMENT

ರಾಗಿ ಬೆಳೆಯಲು ರೈತರ ಹಿಂದೇಟು

ಚನ್ನಗಿರಿ ತಾಲ್ಲೂಕಿನಲ್ಲಿ 500 ಹೆಕ್ಟೇರ್‌ ಇದ್ದ ರಾಗಿ ಬಿತ್ತನೆ 50 ಹೆಕ್ಟೇರ್‌ಗೆ ಕುಸಿತ

ಎಚ್.ವಿ.ನಟರಾಜ್
Published 20 ನವೆಂಬರ್ 2020, 4:51 IST
Last Updated 20 ನವೆಂಬರ್ 2020, 4:51 IST
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿರುವುದು.
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿರುವುದು.   

ಚನ್ನಗಿರಿ: ಸಾಮಾನ್ಯವಾಗಿ ಈಚಿನ ದಿನಗಳಲ್ಲಿ ರಾಗಿ ಮುದ್ದೆ ಊಟ ಮಾಡದೇ ಇರುವ ಮನೆಯೇ ಇಲ್ಲ. ಮಧುಮೇಹ ಎಂಬ ಕಾಯಿಲೆಯಿಂದಾಗಿ ರಾಗಿ ಮುದ್ದೆಯನ್ನು ಊಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ರಾಗಿ ಬೆಳೆಗೆ ಇಷ್ಟೊಂದು ಪ್ರಾಶಸ್ತ್ಯ ಇದ್ದರೂ ಇದನ್ನು ಬೆಳೆಯಲು ಮಾತ್ರ ರೈತರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ವರ್ಷದಿಂದ ವರ್ಷಕ್ಕೆ ರಾಗಿ ಕೊಯ್ಲು ಅತ್ಯಂತ ದುಬಾರಿಯಾಗುತ್ತಿರುವುದು. ಪ್ರತಿ ವರ್ಷ ತಾಲ್ಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನು ರೈತರು ಬೆಳೆಯುತ್ತಿದ್ದರು. ಆದರೆ ಈ ಬಾರಿ ಕೇವಲ 50 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಿದ್ದರು.

1 ಎಕರೆ ರಾಗಿಯನ್ನು ಕೊಯ್ಲು ಮಾಡಲು ಕೃಷಿ ಕಾರ್ಮಿಕರು ₹ 12,000 ನಿಗದಿ ಮಾಡಿರುತ್ತಾರೆ. ಹಾಗೆಯೇ ಬಿತ್ತನೆ, ಕಳೆ ತೆಗೆಯುವುದು ಹಾಗೂ ರಾಗಿ ಕೊಯ್ಲು ಮಾಡಿದ ಮೇಲೆ ರಾಗಿಯನ್ನು ತೆನೆಯಿಂದ ಬೇರ್ಪಡಿಸುವುದು ಸೇರಿ ಒಟ್ಟು
₹ 10,000 ಹಣ ಖರ್ಚಾಗುತ್ತದೆ. ಅಂದರೆ 1 ಎಕರೆಯಲ್ಲಿ ರಾಗಿ ಬೆಳೆಯಲು ₹ 22,000 ರೈತರಿಗೆ ಖರ್ಚಾಗುತ್ತದೆ. 1 ಎಕರೆಯಲ್ಲಿ 10 ಕ್ವಿಂಟಲ್ ರಾಗಿ ಇಳುವರಿ ಬರುತ್ತದೆ. ರಾಗಿಯ ಈಗಿನ ಮಾರುಕಟ್ಟೆ ದರ 1 ಕ್ವಿಂಟಲ್‌ಗೆ ₹ 2500 ಇದೆ. ಅಲ್ಲಿಗೆ 1 ಎಕರೆ ರಾಗಿ ಬೆಳೆದರೆ ರೈತರಿಗೆ ಏನೂ ಉಳಿತಾಯವಾಗುವುದಿಲ್ಲ.

ADVERTISEMENT

‘ವರ್ಷದಿಂದ ವರ್ಷಕ್ಕೆ ರಾಗಿ ಕೊಯ್ಲು ಮಾಡಲು ಕೃಷಿ ಕಾರ್ಮಿಕರು ಹೆಚ್ಚಿನ ಹಣ ಕೇಳುತ್ತಾರೆ. ಹಾಗೆಯೇ ಆದಾಯ ಕೂಡಾ ಕಡಿಮೆಯಾಗಿರುವುದು ರೈತರು ರಾಗಿ ಬೆಳೆಯಲು ಹಿಂದೇಟು ಹಾಕಲು ಕಾರಣವಾಗಿದೆ. ಮನೆಗಳಲ್ಲಿ ದನಕರುಗಳನ್ನು ಸಾಕಿರುವವರು ಮಾತ್ರ ಇದನ್ನು ಬೆಳೆಯಲು ಮುಂದಾಗುತ್ತಿದ್ದಾರೆ’ ಎನ್ನುತ್ತಾರೆ ದೇವರಹಳ್ಳಿ ಗ್ರಾಮದ ರೈತ ಪರಶುರಾಮಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.