ADVERTISEMENT

ಕಬ್ಬು ಬೆಳೆಗಾರರ ಸಂಘಟಿತ ಹೋರಾಟಕ್ಕೆ ಜಯ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 15:24 IST
Last Updated 7 ನವೆಂಬರ್ 2025, 15:24 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆದ ಕಬ್ಬು ಬೆಳೆಗಾರ ರೈತರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿದೆ. ಹೋರಾಟನಿರತ ರೈತ ಬಂಧುಗಳು ನಿರ್ಧಾರವನ್ನು ಸ್ವಾಗತಿಸಿ ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ದೇಶದ ಬೆನ್ನೆಲುಬು ರೈತ, 'ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ' ಎಂಬ ಇತಿಹಾಸ ಮರುಕಳಿಸಿದೆ ಎಂದು ಹೇಳಿದ್ದಾರೆ.

ಈ ಹೋರಾಟದಲ್ಲಿ ಬಿಜೆಪಿಯ ಕಾರ್ಯಕರ್ತನಾಗಿ, ರೈತನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪುತ್ರನಾಗಿ ಭಾಗವಹಿಸಿ ರೈತ ಹೋರಾಟಕ್ಕೆ ದನಿಗೂಡಿಸಿದ ಸಂದರ್ಭ ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. ರಾಜ್ಯದಲ್ಲಿ ರೈತರ ಹಿತಕ್ಕಾಗಿ ನಮ್ಮ ಸ್ಪಂದನೆ ಸದಾ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ರೈತರು ಹೋರಾಟಕ್ಕಿಳಿಯುವ ಸಂದರ್ಭ ಸೃಷ್ಟಿಸದೇ ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಈವರೆವಿಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದು ಮನವಿ ಮಾಡಿದ್ದಾರೆ.

ಮೇಲಿಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ, ರೈತರ ಸೂಕ್ಷ್ಮ ಭಾವನೆಗಳಿಗೆ ಸ್ಪಂದಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ರೈತರ ನಿವೇದನೆಗಳಿಗೆ ಸ್ಪಂದಿಸುವ ‘ವಿಶೇಷ ರೈತ ನೆರವು ಘಟಕ’ವನ್ನು ಸ್ಥಾಪಿಸಲಿ ಎಂದು ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಹೋರಾಟ ನಡೆಸಿದ ರೈತರೆಲ್ಲರನ್ನೂ ಅಭಿನಂದಿಸುವೆ. ರೈತರ ಪರಿಶ್ರಮದ ಬೆವರಿಗೆ ಸಾರ್ಥಕ ಪತಿಫಲ ನಿರಂತರವಾಗಿ ಲಭಿಸುವಂತಾಗಲಿ ಎಂದು ಹಾರೈಸುವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.