ADVERTISEMENT

ಆರ್ಥಿಕ ಇತಿಮಿತಿಯಲ್ಲಿ ಸವಲತ್ತು: ಸಿ.ಎಂ ಸುಳಿವು

ಸಂಕಷ್ಟದಲ್ಲಿರುವ ಸಮುದಾಯಗಳಿಗೆ ‘ಪ್ಯಾಕೇಜ್‌’: ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಮೇ 2020, 1:58 IST
Last Updated 6 ಮೇ 2020, 1:58 IST
   

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ತೀವ್ರ ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ನೇಕಾರರು ಮತ್ತಿತರ ಸಮುದಾಯಗಳಿಗೆ ಕೆಲವು ಸವಲತ್ತುಗಳ ಪ್ಯಾಕೇಜ್‌ ಪ್ರಕಟಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಬುಧವಾರ ಬೆಳಿಗ್ಗೆ 11ಕ್ಕೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಮಂಗಳವಾರ ಈ ಸುಳಿವು ನೀಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಹಣಕಾಸಿನ ಇತಿಮಿತಿಯ ಒಳಗೆ ಸವಲತ್ತು ನೀಡಲಾಗುವುದು’ ಎಂದರು.

ನೇಕಾರರು ಮತ್ತು ಬಿಲ್ಡರ್‌ಗಳ ಜೊತೆ ನಡೆಸಿದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ವಲಸೆ ಕಾರ್ಮಿಕರಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲಿಯೇ ಕೆಲಸ ಒದಗಿಸಿ ಕೊಡಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಕೈಗಾರಿಕಾ ಸಂಸ್ಥೆಗಳು ಕೂಡಾ ಒಪ್ಪಿವೆ. ಹೀಗಾಗಿ ಯಾರೂ ಊರಿಗೆ ಮರಳಬೇಡಿ’ ಎಂದು ಕಾರ್ಮಿಕರಿಗೆ ಮನವಿ ಮಾಡಿದರು.

ADVERTISEMENT

‘ತರಾತುರಿಯಲ್ಲಿ ಊರಿಗೆ ಹೋಗಬೇಕೆಂಬ ಪ್ರಯತ್ನ ಮಾಡದೆ, ಇಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು. ಏನೇ ತೊಂದರೆ ಇದ್ದರೂ ಅನುಕೂಲ ಮಾಡಿಕೊಡಲಾಗುವುದು’ ಎಂದು ಅವರು ಕಾರ್ಮಿಕ ವರ್ಗಕ್ಕೆ ಭರವಸೆ ನೀಡಿದರು.

‘ತಪ್ಪು ಗ್ರಹಿಕೆಯಿಂದ ಬಹಳಷ್ಟು ಕಾರ್ಮಿಕರು ಅನಗತ್ಯವಾಗಿ ಊರಿಗೆ ಹೊರಟು ಹೋಗುವ ಮನಸ್ಥಿತಿಯಲ್ಲಿದ್ದರು. ಈ ಪೈಕಿ, ಅನೇಕರಿಗೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದೇವೆ. ಆತಂಕಕ್ಕೆ ಒಳಗಾಗಿರುವ ಕಾರ್ಮಿಕರ ಮನವೊಲಿಸಲು ಸಚಿವರಿಗೆ ಸೂಚಿಸಲಾಗಿದೆ’ ಎಂದರು.

‘ಇತರ ರಾಜ್ಯಗಳಲ್ಲಿರುವ ಕೋವಿಡ್‌– 19 ಪರಿಸ್ಥಿತಿಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಹೀಗಾಗಿ ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವ್ಯಾಪಾರ, ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕೆಗಳನ್ನು ಮತ್ತೆ ಆರಂಭಿಸಬೇಕಾಗಿದೆ. ಈ ಕಾರಣಕ್ಕೆ, ಕಾರ್ಮಿಕರ ಅನಗತ್ಯ ಪ್ರಯಾಣವನ್ನು ನಿಯಂತ್ರಿಸಬೇಕಾದ ಬಗ್ಗೆಯೂ ಬಿಲ್ಡರ್‌ಗಳ ಜೊತೆ ಚರ್ಚಿಸಿದ್ದೇನೆ’ ಎಂದು ಅವರು ಹೇಳಿದರು.

‘ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದೇವೆ. ಕೆಲಸ ಮಾಡದವರಿಗೂ ಸಂಬಳ, ಒಳ್ಳೆಯ ಊಟ ನೀಡಿರುವುದಾಗಿ ಬಿಲ್ಡರ್‌ಗಳು ತಿಳಿಸಿದರು’ ಎಂದು ಯಡಿಯೂರಪ್ಪ ವಿವರಿಸಿದರು.

ರಾಜ್ಯ ಸರ್ಕಾರಿ ನೌಕರರ ಹೆಚ್ಚುವರಿ ತುಟ್ಟಿಭತ್ಯೆಗೆ ತಡೆ
ಲಾಕ್‌ಡೌನ್‌ನಿಂದಾಗಿ ಕೇಂದ್ರ ಸರ್ಕಾರದ ನೌಕರರಿಗೆ ಹೆಚ್ಚುವರಿ ತುಟ್ಟಿಭತ್ಯೆ ತಡೆಹಿಡಿದ ಮಾದರಿಯಲ್ಲೇ, ರಾಜ್ಯ ಸರ್ಕಾರಿ ನೌಕರರಿಗೂ 2021ರ ಜೂನ್‌ವರೆಗೆ ಹೆಚ್ಚುವರಿ ತುಟ್ಟಿಭತ್ಯೆ ನೀಡದಿರಲು ಸರ್ಕಾರ ನಿರ್ಧರಿಸಿದೆ.

ಕಳೆದ ಜನವರಿ 1ರಿಂದ ನೀಡಬೇಕಾದ ಹೆಚ್ಚುವರಿ ತುಟ್ಟಿಭತ್ಯೆಯ ಜತೆಗೆ ಇದೇ ಜುಲೈ ಹಾಗೂ 2021ರ ಜನವರಿಯಲ್ಲಿ ಕೊಡಬೇಕಾಗಿರುವ ಹೆಚ್ಚುವರಿ ತುಟ್ಟಿಭತ್ಯೆಯನ್ನೂ ನೀಡುವುದಿಲ್ಲ. 2021ರ ಜುಲೈಯಲ್ಲಿ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಒಂದು ಪರಿಷ್ಕೃತ ಹೆಚ್ಚುವರಿ ತುಟ್ಟಿಭತ್ಯೆ ಪ್ರಮಾಣ ನಿಗದಿಪಡಿಸಲಾಗುತ್ತದೆ. ಆದರೆ ಈ ಒಂದೂವರೆ ವರ್ಷದ ಬಾಕಿಯನ್ನು ಪಾವತಿಸಲಾಗುವುದಿಲ್ಲ. ಹಾಲಿ ತುಟ್ಟಿಭತ್ಯೆಯನ್ನು ಯಥಾಪ್ರಕಾರ ನೀಡಲಾಗುವುದು ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ

ಇದು ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ಪಿಂಚಣಿದಾರರು, ಯುಜಿಸಿ, ಐಸಿಎಆರ್‌, ಎಐಸಿಟಿಇ ವೇತನ ಶ್ರೇಣಿಯವರು, ನ್ಯಾಯಾಂಗ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ನಿಗಮ, ಮಂಡಳಿ, ಸರ್ಕಾರಿ ಸ್ವಾಯತ್ತ ಉದ್ದಿಮೆಗಳ ನೌಕರರು ಸೇರಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.