ADVERTISEMENT

ಚಿತ್ರದುರ್ಗ | ಬಾಲಕಿಯ ವಿವಾಹಕ್ಕೆ ಯತ್ನ: ಐವರು ವಶಕ್ಕೆ

ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಚಳ್ಳಕೆರೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 23:30 IST
Last Updated 7 ಜೂನ್ 2025, 23:30 IST
<div class="paragraphs"><p>ಬಾಲ್ಯ ವಿವಾಹ</p></div>

ಬಾಲ್ಯ ವಿವಾಹ

   

ಚಿತ್ರದುರ್ಗ: 8ನೇ ತರಗತಿ ವಿದ್ಯಾರ್ಥಿನಿಯ ವಿವಾಹ ಮಾಡಲು ಮುಂದಾಗಿ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರ ಐವರ ವಿರುದ್ಧ ಚಳ್ಳಕೆರೆ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಮದುವೆಯಾಗುವಂತೆ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ತಾಯಿ, ಬಲವಂತವಾಗಿ ತಾಳಿ ಕಟ್ಟಲು ಯತ್ನಿಸಿದ ಸೋದರ ಮಾವ, ಆತನ ಅಣ್ಣ, ಅತ್ತಿಗೆ, ಬಾಲಕಿಯ ಅಜ್ಜಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಎಲ್ಲ ಐವರು ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ADVERTISEMENT

ಜೂನ್‌ 4ರಂದು ಬಾಲಕಿಗೆ ಒತ್ತಾಯಪೂರ್ವಕ ಮದುವೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ತನಗಿಷ್ಟವಿಲ್ಲದ ಮದುವೆಗೆ ಬಾಲಕಿ ತೀವ್ರ ಪ್ರತಿರೋಧ ಒಡ್ಡಿದ್ದರಿಂದ ಸಂಬಂಧಿಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ದಿಟ್ಟತನ ಪ್ರದರ್ಶಿಸಿದ ಬಾಲಕಿ ಬಾಲ್ಯವಿವಾಹದಿಂದ ಪಾರಾಗಿದ್ದಳು.

ಘಟನೆ ಕುರಿತ ವಿಡಿಯೊ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ವೀಕ್ಷಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದರಾದರೂ ಬಾಲ್ಯವಿವಾಹ ನಡೆಯದ್ದರಿಂದ ಯಾರ ವಿರುದ್ಧವೂ ಪ್ರಕರಣ ದಾಖಲಿಸದೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

‘10–15 ಜನ ಬಾಲಕಿಯ ಮೇಲೆ ಎರಗಿ ತಾಳಿ ಕಟ್ಟಿಸಲು ಯತ್ನಿಸಿದ್ದಾರೆ. ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಕಾರಣ ದೂರು ದಾಖಲು ಮಾಡಿಕೊಂಡಿದ್ದೇವೆ’ ಎಂದು ಚಳ್ಳಕೆರೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.