ADVERTISEMENT

ರಾಯಚೂರು: ಬಿಸಿಲಿನ ಝಳದಿಂದ ಬಳಲಿ ಐವರ ಸಾವು

ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ ದಾಖಲು

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:44 IST
Last Updated 4 ಮೇ 2024, 23:44 IST
<div class="paragraphs"><p>ರಾಯಚೂರು ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗಿದರು</p></div>

ರಾಯಚೂರು ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗಿದರು

   

ರಾಯಚೂರು: ಜಿಲ್ಲೆಯಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಶನಿವಾರವೂ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಪ್ರಖರ ಬಿಸಿಲಿನ ಝಳದಿಂದ ಬಳಲಿ ಐದು ಜನರು ಮೃತಪಟ್ಟಿದ್ದಾರೆ.

ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದಲ್ಲಿ ವೀರೇಶ ಕನಕಪ್ಪ (70), ಗಂಗಮ್ಮ ಹನುಮಂತ (57),  ಪ್ರದೀಪ ತಿಮ್ಮಣ್ಣ ಪೂಜಾರಿ (19) ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ದುರ್ಗಮ್ಮ ಹನುಮಂತಪ್ಪ ಉಪ್ಪಾರ (69) ಅವರು ಮಗಳನ್ನು ಭೇಟಿಯಾಗಲು ಶುಕ್ರವಾರ ಸುಂಕಾಪುರಕ್ಕೆ ಹೋದಾಗ ಕೊನೆಯುಸಿರೆಳೆದಿದ್ದಾರೆ.

ADVERTISEMENT

ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬಂದ ಹನುಮಂತ (45) ಸ್ವಲ್ಪ ಹೊತ್ತಿನಲ್ಲೇ ಜೀವ ಬಿಟ್ಟಿದ್ದಾರೆ.

‘ಸಿಂಧನೂರು ತಾಲ್ಲೂಕಿನಲ್ಲಿ ಮೃತಪಟ್ಟವರ ಸಾವಿಗೆ ಪ್ರಖರ ಬಿಸಿಲೊಂದೇ ಕಾರಣ ಅಲ್ಲ. ಮೂವರು ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎಂಬ ಮಾಹಿತಿ ಬಂದಿದೆ. ಇಬ್ಬರು ನಿರ್ಜಲೀಕರಣದಿಂದ ಕೊನೆಯುಸಿರೆಳೆದಿರುವ ಸಾಧ್ಯತೆ ಇದೆ. ವೈದ್ಯಕೀಯ ತಂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಶ ಬಾಬು ತಿಳಿಸಿದ್ದಾರೆ.

ಮಸ್ಕಿಯಲ್ಲಿ ಶುಕ್ರವಾರ ನಡೆದುಕೊಂಡು ಹೋಗುತ್ತಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಬಿಸಿಲಿನ ತಾಪದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು.

ಶಕ್ತಿನಗರದ ವೈಟಿಪಿಎಸ್‌ ಮುಂಭಾಗ ರಾಯಚೂರು–ಹೈದರಾಬಾದ್ ಹೆದ್ದಾರಿಯಲ್ಲಿ ಶನಿವಾರ ಚಲಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ.

‘ಜಿಲ್ಲೆಯಲ್ಲಿ ಒಂದು ವಾರ 45 ಡಿಗ್ರಿ ಸೆಲ್ಸಿಯಸ್‌ ತಾಪಾಮಾನ ದಾಖಲಾಗಿದ್ದು, ಮೇ 8ರವರೆಗೂ ಬಿಸಿಲಿನ ತಾಪ ಹಾಗೂ ಬಿಸಿಗಾಳಿ ಮುಂದುವರಿಯಲಿದೆ’ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹವಾಮಾನ ಘಟಕದ ಶಾಂತಪ್ಪ ದುತ್ತರಗಾಂವಿ ತಿಳಿಸಿದ್ದಾರೆ.

ರಣ ಬಿಸಿಲು: ಜನಜೀವನ ಅಸ್ತವ್ಯಸ್ಥ

ಅತಿಯಾದ ಬಿಸಿಲಿನಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೃಷ್ಣಾ ತುಂಗಭದ್ರಾ ನದಿಗಳು ಬತ್ತಿವೆ. ಸಾವಿರಾರು ಎಕರೆ ಕೃಷಿ ಭೂಮಿ ಮರುಭೂಮಿಯಂತೆ ಕಾಣುತ್ತಿದೆ. ಬಿಸಿಲಿನ ಧಗೆ ಜಿಲ್ಲೆಯ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಳಗಾಗುತ್ತಲೇ ಪ್ರಖರ ಬಿಸಿಲು ಕಾಣಿಸಿಕೊಳ್ಳುತ್ತಿದೆ. 10 ಗಂಟೆಯ ನಂತರ ಜನ ಮನೆಗಳಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ತಗಡಿನ ಶೆಡ್‌ಗಳಲ್ಲಿ ವಾಸವಾಗಿರುವ ಬಡವರು ಬೃಹತ್‌ ಮರಗಳು ಮಂದಿರಗಳ ಆವರಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ನಗರಪ್ರದೇಶದಲ್ಲಿ ಕಾಂಕ್ರೀಟ್‌ ಕಟ್ಟಡಗಳು ಬಿಸಿಹಬೆ ಹೊರ ಸೂಸುತ್ತಿವೆ. ಎಷ್ಟು ನೀರು ಕುಡಿದರೂ ಜನರ ಬಾಯಾರಿಕೆ ಕಡಿಮೆಯಾಗುತ್ತಿಲ್ಲ. ಕಟ್ಟಡಗಳು ಕಾದಕಾವಲಿಯಂತಾಗಿವೆ. ನಲ್ಲಿಗಳಲ್ಲಿ ಬಿಸಿನೀರು ಬರುತ್ತಿದ್ದು ರಾತ್ರಿ ವೇಳೆಯಲ್ಲೂ ಧಗೆ ಹೆಚ್ಚಿದೆ. ಬಿಸಿಲಿಗೆ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.