ADVERTISEMENT

ರಾಷ್ಟ್ರಧ್ಜಜ ಹಾರಿಸುವಾಗ ವಿದ್ಯುತ್ ತಗುಲಿ ಬಾಲಕ ಸಾವು: ಪರಿಹಾರ ನೀಡಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 3:32 IST
Last Updated 20 ಆಗಸ್ಟ್ 2021, 3:32 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ತುಮಕೂರು ಜಿಲ್ಲೆಯ ಶಾಲೆಯೊಂದರಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಬಾಲಕನ ಪೋಷಕರಿಗೆ ಕೂಡಲೇ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಸಂಬಂಧ ಸ್ವEಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು’ ಎಂದು ತಿಳಿಸಿತು.

‘ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ಶಾಲೆಯಲ್ಲಿ ಧ್ವಜ ಹಾರಿಸುವ ತಯಾರಿ ನಡೆಸುತ್ತಿದ್ದಾಗ ಧ್ವಜ ಕಂಬಕ್ಕೆ ವಿದ್ಯುತ್ ತಗುಲಿತ್ತು. ಚಂದನ್(16) ಮೃತಪಟ್ಟಿದ್ದು, ಶಶಾಂಕ್ ಮತ್ತು ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ADVERTISEMENT

‘ಇಬ್ಬರು ಬಾಲಕರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಚಿಕಿತ್ಸೆ ದೊರೆಯುವಂತೆ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು. ಚಿಕಿತ್ಸಾ ವೆಚ್ಚವನ್ನೂ ಸರ್ಕಾರವೇ ಭರಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು.

ಎರಡು ವರ್ಷಗಳ ಹಿಂದೆ ಕೊಪ್ಪಳದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕಂಬಕ್ಕೆ ಧ್ವಜ ಕಟ್ಟುವಾಗ ಐವರು ವಿದ್ಯಾರ್ಥಿಗಳಿಗೆವಿದ್ಯುತ್ ಸ್ಪರ್ಶಿಸಿತ್ತು ಎಂದು ಅಮಿಕಸ್ ಕ್ಯೂರಿ ಅವರು ಪೀಠದ ಗಮನಕ್ಕೆ ತಂದರು. ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಮಿತಿ ರಚಿಸುವಂತೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.