ADVERTISEMENT

ವರ್ಷ ಕಳೆದರೂ ತಪ್ಪಿಲ್ಲ ಬೆಳಗಾವಿ ಪ್ರವಾಹ ಸಂತ್ರಸ್ತರ ಸಂಕಟ!

ಶ್ರೀಕಾಂತ ಕಲ್ಲಮ್ಮನವರ
Published 15 ಆಗಸ್ಟ್ 2020, 21:28 IST
Last Updated 15 ಆಗಸ್ಟ್ 2020, 21:28 IST
ವರದಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಹಾವೇರಿ ತಾಲ್ಲೂಕಿನ ನಾಗನೂರು–ಕೂಡಲ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಡಾಂಬರು ರಸ್ತೆಯ ಮೇಲೆ ಬಟ್ಟೆ ಒಗೆಯುವ ಮತ್ತು ಜಾನುವಾರು ಮೈ ತೊಳೆಯುತ್ತಿರುವ ದೃಶ್ಯ
ವರದಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಹಾವೇರಿ ತಾಲ್ಲೂಕಿನ ನಾಗನೂರು–ಕೂಡಲ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಡಾಂಬರು ರಸ್ತೆಯ ಮೇಲೆ ಬಟ್ಟೆ ಒಗೆಯುವ ಮತ್ತು ಜಾನುವಾರು ಮೈ ತೊಳೆಯುತ್ತಿರುವ ದೃಶ್ಯ    
""

ಬೆಳಗಾವಿ: ಪ್ರವಾಹಕ್ಕೆ ನಲುಗಿ ಒಂದು ವರ್ಷ ಕಳೆದರೂ ಜಿಲ್ಲೆಯ ಎಲ್ಲ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ಕೊಡುವಂತೆ ಒತ್ತಾಯಿಸಿ, ಈಗಲೂ ಅಲ್ಲೊಂದು, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಇದರ ಜೊತೆ ಅತಿವೃಷ್ಟಿಯೂ ಕೂಡಿಕೊಂಡು ಅಪಾರ ಹಾನಿಯನ್ನುಂಟು ಮಾಡಿತ್ತು.

ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಅಥಣಿ, ಗೋಕಾಕ, ರಾಮದುರ್ಗ, ಸವದತ್ತಿ, ರಾಯಬಾಗ, ಹುಕ್ಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. 972 ಗ್ರಾಮಗಳು ಜಲಾವೃತವಾಗಿದ್ದವು. 44,166 ಮನೆಗಳು ಹಾನಿಗೊಳಗಾಗಿದ್ದವು. ಒಂದು ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿದ್ದರು. 38 ಜನರು ಸಾವಿಗೀಡಾಗಿದ್ದರು. ಅಂದಾಜು 2.21 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿತ್ತು. ಅತಿವೃಷ್ಟಿ ಹಾಗೂ ಪ್ರವಾಹ ಇಡೀ ಜಿಲ್ಲೆಯನ್ನು ಹಿಂಡಿಹಿಪ್ಪಿ ಮಾಡಿತ್ತು.

ADVERTISEMENT

ವರ್ಷವಾದರೂ ತಪ್ಪಿಲ್ಲ ಅಲೆದಾಟ!:ಹಾನಿಗೊಳಗಾದ ಪ್ರಮಾಣ ಆಧರಿಸಿ ಮನೆಗಳನ್ನು ಎ.ಬಿ.ಸಿ ಕೆಟಗೇರಿ ಮಾಡಲಾಗಿತ್ತು. ಸಂಪೂರ್ಣವಾಗಿ ಹಾನಿಗೊಳಗಾದ ‘ಎ’ ಕೆಟಗೇರಿಯ ಮನೆಗಳಿಗೆ ₹ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಮೊದಲ ಕಂತಿನ ಹಣ ಪಡೆದು ಮನೆ ಕಟ್ಟುವ ಕೆಲಸ ಆರಂಭಿಸಿದ್ದರು. ಈಗ ಸ್ಲ್ಯಾಬ್‌ ಹಂತಕ್ಕೆ ಬಂದು ನಿಂತಿದ್ದು, 2ನೇ ಹಾಗೂ 3ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಹಣ ಬಾರದಿದ್ದರಿಂದ ಕೆಲಸಗಳು ಅರ್ಧಕ್ಕೆ ನಿಂತಿವೆ.

ಅಲ್ಪಸ್ವಲ್ಪ ಹಾನಿಗೊಳಗಾಗಿದ್ದ ‘ಬಿ’ ಹಾಗೂ ‘ಸಿ’ ಕೆಟಗೇರಿಯ ಬಹುತೇಕ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇದುವರೆಗೆ ಒಟ್ಟಾರೆಯಾಗಿ 35 ಸಾವಿರ ಮನೆಗಳಿಗೆ ₹ 488.74 ಕೋಟಿ ನೀಡಲಾಗಿದೆ. ದಾಖಲೆ ಪತ್ರಗಳು ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ 9,166 ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಮನೆಗಳು ಪೂರ್ಣಗೊಳ್ಳದಿರುವುದರಿಂದ ಹಾಗೂ ಪರಿಹಾರ ದೊರೆಯದಿದ್ದರಿಂದ ಹಲವು ಕಡೆ ಸಂತ್ರಸ್ತರು ದೇವಸ್ಥಾನಗಳ ಆವರಣದಲ್ಲಿ, ಶಾಲಾ ಆವರಣದಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ಈಗಲೂ ವಾಸಿಸುತ್ತಿದ್ದಾರೆ.

ರಾಮದುರ್ಗ ತಾಲ್ಲೂಕಿನ ಹಲಗತ್ತಿಯ ದೇವಸ್ಥಾನದಲ್ಲಿ, ಪಡಸಿ ಗ್ರಾಮದ ಸಮುದಾಯ ಭವನದಲ್ಲಿ, ಶಿವಪೇಟೆಯ ಸಮುದಾಯ ಭವನದಲ್ಲಿ, ಗೋಕಾಕ ತಾಲ್ಲೂಕಿನ ಕಲಾರಕೊಪ್ಪ ಗ್ರಾಮದ ಶಾಲೆಯಲ್ಲಿ ಜನರು ಮಾಡುತ್ತಿದ್ದಾರೆ. ಗೋಕಾಕ ನಗರದ ಆಶ್ರಯ ಬಡಾವಣೆಯ ಅರಣ್ಯ ಇಲಾಖೆಯ ಜಾಗದಲ್ಲಿ ಸುಮಾರು 300 ಕುಟುಂಬಗಳು ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿವೆ.

ತಾತ್ಕಾಲಿಕ ನೆರವಿಗಾಗಿ ₹ 10 ಸಾವಿರ, ಬಾಡಿಗೆಗಾಗಿ ಪ್ರತಿ ತಿಂಗಳು ₹ 5 ಸಾವಿರ, ವ್ಯಾಪಾರಸ್ಥರಿಗೆ ₹ 25 ಸಾವಿರ ಪರಿಹಾರ ನೀಡುವ ಭರವಸೆಯೂ ಪೂರ್ಣವಾಗಿ ಈಡೇರಿಲ್ಲ. ಪ್ರವಾಹ ಸಂದರ್ಭದಲ್ಲಿ ಮೃತರಾಗಿದ್ದ 38 ಜನರ ಪೈಕಿ ಇನ್ನೂ ಐದು ಜನರ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ.

ಕಾರವಾರ ತಾಲ್ಲೂಕಿನ ಕದ್ರಾದಲ್ಲಿ ಕಳೆದ ವರ್ಷ ಕಾಳಿ ನದಿಯ ಪ್ರವಾಹದಲ್ಲಿ ಹಾನಿಗೀಡಾದ ಮನೆ ಇನ್ನೂ ಖಾಲಿಯಾಗಿದೆ.

ನೆರೆ ಇಳಿದರೂ, ಬತ್ತದ ಕಣ್ಣೀರು
ಹಾವೇರಿ:
ಜಿಲ್ಲೆಯಲ್ಲಿ ಸೂರು ಕಳೆದುಕೊಂಡವರು ಸಮುದಾಯ ಭವನ, ಬಾಡಿಗೆ ಮನೆ, ಟೆಂಟ್‌ಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.

ಶೇ 60ರಷ್ಟು ಮನೆ ಶಿಥಿಲವಾಗಿದ್ದರೂ ‘ಸಿ’ ವರ್ಗಕ್ಕೆ ಸೇರಿಸಿ, ₹50 ಸಾವಿರ ಪರಿಹಾರ ಕೊಟ್ಟಿದ್ದಾರೆ. ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ, ಬಾಡಿಗೆ ಹಣ ಕೊಟ್ಟಿಲ್ಲ... ಹೀಗೆ ನಾಗನೂರ, ಕೂಡಲ, ಅಲ್ಲಾಪುರ, ದೇವಗಿರಿ ಗ್ರಾಮಸ್ಥರುಸಮಸ್ಯೆಗಳನ್ನು ತೋಡಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ ನೆರೆಯಿಂದ ಹಾನಿಯಾದ 669 ಶಾಲೆಗಳ 1,459 ಕೊಠಡಿಗಳ ದುರಸ್ತಿಗೆ ₹18.09 ಕೋಟಿ ಅನುದಾನ ಮೀಸಲಿಡಲಾಗಿತ್ತು. ₹13.57 ಕೋಟಿ ಬಿಡುಗಡೆಯಾಗಿದೆ. ಇನ್ನೂ 270 ಶಾಲೆಗಳ ಕಾಮಗಾರಿ ಮುಗಿದೇ ಇಲ್ಲ.

ಬೆಳೆ ಪರಿಹಾರ ₹1 ಜಮಾ!
ಬಾಗಲಕೋಟೆ:
ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ್ದ ಬಾದಾಮಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಬೆಳೆ ಹಾನಿಗೊಳಗಾದ 131 ಮಂದಿಯ ಪೈಕಿ ಹೆಕ್ಟೇರ್‌ಗೆ ₹26 ಸಾವಿರದಂತೆ 107 ಮಂದಿಗೆ ಪರಿಹಾರ ಪಡೆದಿ ದ್ದಾರೆ. ‘ನಮ್ಮದು ಒಂದು ಹೆಕ್ಟೇರ್‌ನಷ್ಟು ಮೆಕ್ಕೆಜೋಳ ಹಾನಿಗೀಡಾಗಿದೆ. ಹೆಬ್ಬಳ್ಳಿಯ ಕೆವಿಜಿ ಬ್ಯಾಂಕ್‌ನ ನಮ್ಮ ತಂದೆ ಈರಯ್ಯ ಕುಲಕರ್ಣಿ ಅವರ ಖಾತೆಗೆ ಬೆಳೆ ಹಾನಿ ಪರಿಹಾರ ಮೊತ್ತ ₹1 ಮಾತ್ರ ಜಮಾ ಆಗಿದೆ. ಆ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಿದ್ದೇವೆ. ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಪುತ್ರ ಶಿವು ‘ಪ್ರಜಾವಾಣಿ’ಗೆ ತಿಳಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 275 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದ್ದು, ದುರಸ್ತಿಗೆ ₹2.76 ಕೋಟಿ ಮೀಸಲಿಡಲಾಗಿತ್ತು. ಸಂಪೂರ್ಣ ಶಿಥಿಲವಾಗಿದ್ದ 65 ಅಂಗನವಾಡಿಗಳನ್ನು ನೆಲಸಮಗೊಳಿಸಿ, ಪುನರ್‌ ನಿರ್ಮಿಸಲು ಪಿಡಬ್ಲ್ಯೂಡಿಗೆ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.

ರಸ್ತೆ, ಸಿ.ಡಿ, ಸೇತುವೆ, ಕೆರೆ ಸೇರಿದಂತೆ ಒಟ್ಟು 326 ದುರಸ್ತಿ ಕಾಮಗಾರಿಗಳಿಗೆ ₹5.47 ಕೋಟಿ ಮೀಸಲಿಡಲಾಗಿತ್ತು. ಹಾನಗಲ್‌ ತಾಲ್ಲೂಕಿನ ಕೂಡಲ ಗ್ರಾಮದ ಸಮೀಪ ವರದಾ ನದಿಯ ಸೇತುವೆ ಕಳೆದ ವರ್ಷ ಮುಳುಗಿತ್ತು. ಮೇಲ್ಸೇತುವೆ ಕಾರ್ಯ ನನೆಗುದಿಗೆ ಬಿದ್ದಿದೆ.

ಬಾಕಿ ಪರಹಾರಕ್ಕೆ ಕಾಯುತ್ತಿವೆ ಮನೆಗಳು
ಧಾರವಾಡ: ಕಳೆದ ವರ್ಷ ಧಾರವಾಡ ತಾಲ್ಲೂಕು, ಅಳ್ನಾವರ, ನವಲಗುಂದ ಭಾಗದಲ್ಲಿ ತೀವ್ರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಭಾರಿ ಮಳೆಗೆ ಐವರು ಮೃತಪಟ್ಟಿದ್ದರು.

ಸರ್ಕಾರ ಘೋಷಿಸಿದ ₹5 ಲಕ್ಷ ಪರಿಹಾರ ಮೊತ್ತದಲ್ಲಿ ಆರಂಭದಲ್ಲಿ ₹1ಲಕ್ಷ ಹಾಗೂ ನಂತರ ಡಿಸೆಂಬರ್‌, ಫೆಬ್ರುವರಿ ಹಾಗೂ ಜುಲೈ ತಿಂಗಳಲ್ಲಿ ತಲಾ ₹1ಲಕ್ಷ ಬಿಡುಗಡೆಯಾಗಿದೆ. ‘ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಹಣ ಕೊಡಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಆದರೆ ಹಣ ಬಂದಿಲ್ಲ’ ಎಂದು ಅಳ್ನಾವರದ ಅರುಣ ಕುಶಾಲಪುರ ಬೇಸರ ವ್ಯಕ್ತಪಡಿಸಿದರು.

ಶೇ 75ಕ್ಕಿಂತ ಹೆಚ್ಚು ಹಾನಿಗೊಂಡ 117 ಮನೆಗಳಲ್ಲಿ, 106 ಮನೆಯವರಿಗೆ ತಾತ್ಕಾಲಿಕವಾಗಿ ಇರಲು ಮಾಸಿಕ ₹5ಸಾವಿರದಂತೆ ಬಾಡಿಗೆಯನ್ನು ಜಿಲ್ಲಾಡಳಿತ ನೀಡಿದೆ. ₹5.3ಲಕ್ಷ ಖರ್ಚನ್ನು ಜಿಲ್ಲಾಡಳಿತ ಮಾಡಿದೆ.

ಜಿಲ್ಲೆಯಲ್ಲಿ 265 ಶಾಲೆಗಳ 912 ಕೊಠಡಿಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದವು. ಇದಕ್ಕಾಗಿ ಸರ್ಕಾರದಿಂದ ₹10ಕೋಟಿ ಮಂಜೂರಾಗಿತ್ತು.

‘ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿ ನಿಧಿಯಿಂದ 199 ಶಾಲೆಗಳ 444 ಕೊಠಡಿಗಳ ದುರಸ್ತಿಗೆ ₹53ಕೋಟಿ ಮಂಜೂರಾಗಿದೆ. ಬಹುತೇಕ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ಹಂಚಾಟೆ ತಿಳಿಸಿದರು.
**
ಕುಂಟುತ್ತಾ ಸಾಗಿದೆ ಪರಿಹಾರ ಕಾರ್ಯ
ಬಾಗಲಕೋಟೆ:
ಕೃಷ್ಣೆ, ಮಲಪ್ರಭಾ ಹಾಗೂ ಘಟಪ್ರಭೆ ಉಕ್ಕಿಹರಿದ ಪರಿಣಾಮ ಕಳೆದ ಆಗಸ್ಟ್‌ನಲ್ಲಿ ಎದುರಾಗಿದ್ದ ಶತಮಾನದ ವಿಪತ್ತಿನಿಂದ ಬಾಗಲಕೋಟೆ ಜಿಲ್ಲೆ ಇನ್ನೂ ಚೇತರಿಸಿಕೊಂಡಿಲ್ಲ.

ಇಲ್ಲಿಯವರೆಗೆ 113 ಶಾಲೆಗಳ 316 ಕೊಠಡಿ ದುರಸ್ತಿ ಮಾಡಲಾಗಿದೆ. ಸಂಪೂರ್ಣ ಹಾನಿಗೀಡಾಗಿದ್ದ 27 ಶಾಲೆಗಳ ಪೈಕಿ 16ಕ್ಕೆ ಹೊಸ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಅನುದಾನದ ಮೊದಲ ಕಂತು ₹2.43 ಕೋಟಿ ಬಿಡುಗಡೆ ಆಗಿದೆ. ಇನ್ನೂ 11 ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭವಾಗಬೇಕಿದೆ.

ನೆನಪಿನೋಲೆ ಬರೆದಿದ್ದೇವೆ: ಆಗ ಶಾಲಾ ಕಟ್ಟಡ ಕಟ್ಟಿಸಿಕೊಡುವುದಾಗಿ ಖಾಸಗಿ ಸಂಸ್ಥೆಗಳು ವಾಗ್ದಾನ ಮಾಡಿದ್ದವು. ‘ನಾವು ಈಗಾಗಲೇ ನಿವೇಶನ ಒದಗಿಸಿ, ಅವರಿಗೆ ನೆನಪಿನೋಲೆ ಬರೆದಿದ್ದೇವೆ’ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ಹೇಳುತ್ತಾರೆ.

**
ಬಹುತೇಕ ಸಂತ್ರಸ್ತರಿಗೆ ಪರಿಹಾರ ನೀಡಿದ್ದೇವೆ. ಸಮರ್ಪಕ ದಾಖಲೆಗಳ ಕೊರತೆಯಿಂದಾಗಿ ಕೆಲವರಿಗೆ ಪರಿಹಾರ ದೊರೆತಿಲ್ಲ.
– ರವೀಂದ್ರ ಕರಲಿಂಗಣ್ಣವರ, ಚಿಕ್ಕೋಡಿ ಉಪವಿಭಾಗಾಧಿಕಾರಿ

**
‘ಬೆಳೆ ಹಾನಿ’ ಪರಿಹಾರ ವಿತರಣೆಯಲ್ಲಿ ಸುಮಾರು ₹20 ಕೋಟಿ ಅವ್ಯವಹಾರದ ಆರೋಪದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. ಪರಿಹಾರ ಕಾರ್ಯ ಸ್ಥಗಿತಗೊಳಿಸಿದ್ದು, ಶೇ 40ರಷ್ಟು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ.
– ರಾಮಣ್ಣ ಕೆಂಚೆಳ್ಳೇರ, ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ರೈತ ಸಂಘ

**
ಈ ವರ್ಷವೂ ಕದ್ರಾ ಜಲಾಶಯದ ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಿದಾಗ ಕದ್ರಾ ಗ್ರಾಮಕ್ಕೆ ನೀರು ಬಂದಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ.
-ದಿನೇಶ, ಕದ್ರಾ ನಿವಾಸಿ (ಕಾರವಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.