
ಬೆಂಗಳೂರು: ಕೃಷಿ ವಲಯಕ್ಕೆ ಪೂರಕವಾಗಿ ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮಧ್ಯ ಏಷ್ಯಾದ ದೇಶಗಳಿಗೆ ಆಹಾರೋತ್ಪನ್ನಗಳನ್ನು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಎಂಎಸ್ಎಂಇ, ಉದ್ಯೋಗ, ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ 2025 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ 353 ಮಿಲಿಯನ್ ಟನ್ ಆಹಾರ ಬೆಳೆ, 355 ಟನ್ ತರಕಾರಿ,ಹಣ್ಣು ಬೆಳೆಯಲಾಗುತ್ತಿದೆ. ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿ ಎಲ್ಲರಿಗೂ ಆಹಾರ ಸಿಗುವಂತಾಗಿದೆ. ಆದರೆ ಭಾರತದ ಅಗತ್ಯ ಇರುವ ರಾಜ್ಯಗಳಿಗೆ ಆಹಾರೋತ್ಪನ್ಬದ ಬೇಡಿಕೆ ಇದೆ. ಆಹಾರ ಸಂಸ್ಕರಣೆ ಉದ್ಯಮ ವಿಸ್ತರಿಸಿ ಅಗತ್ಯ ಇರುವ ಕಡೆ ಸರಬರಾಜು ಮಾಡಬೇಕಿದೆ ಎಂದರು.
ಮೇಳ ಉದ್ಘಾಟಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಕೃಷಿಯತ್ತ ಯುವಕರು ಆಕರ್ಷೊತರಾಗುತ್ತಿದ್ದಾರೆ. ಅದರಲ್ಲೂ ಕಡಿಮೆ ಸಂಬಳ ಇರುವವರಿಗೆ ಕೃಷಿ ಮುಖ್ಯ ಉದ್ಯೋಗವಾಗುತ್ತಿದೆ. ಅಂತವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಕೆವಿಕೆ ನ್ಯಾಕ್ ಎ+ ಮಾನ್ಯತೆಯೊಂದಿಗೆ ದೇಶದ ಪ್ರಮುಖ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ. ಇಲ್ಲಿನ ಸಂಶೋಧನೆ ಲಾಭ ಜನರಿಗೆ ಸಿಗಲಿ ಎಂದರು.
ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಯನ್ನು ರಾಮನಗರ ರಾಲೂಕಿನ ಎಲ್.ವಿ.ಶಿವರಾಜು, ದೊಡ್ಡ ಬಳ್ಳಾಪುರ ತಾಲೂಕು ಕುಂಜನಹಳ್ಳಿ ಗ್ರಾಮದ ಪದ್ಮಿನಿ, ಎಚ್.ಡಿ.ದೇವೇಗೌಡ ಪ್ರಶಸ್ತಿಯನ್ನು ಕೋಲಾರ ತಾಲೂಕಿನ ಮರನಹಳ್ಳಿ ಗ್ರಾಮದ ಎಂ.ಎನ್.ರವಿಶಂಕರ್ ಅವರಿಗೆ ಪ್ರದಾನ ಮಾಡಲಾಯಿತು.
ಹೊಸ ತಳಿಗಳನ್ನು ಜನಾರ್ಪಣೆಗೊಳಿಸಲಾಯಿತು. 750 ಮಳಿಗೆಗಳಲ್ಲಿ ವೈವಿಧ್ಯಮಯ ಮಾಹಿತಿ ಇದೆ. ನಾಲ್ಕು ದಿನ ಮೇಳ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.