ADVERTISEMENT

ರಾಜ್ಯದ ಪಾರಂಪರಿಕ ತಾಣಗಳ ವೀಕ್ಷಣೆ ಕಾರ್ಯಕ್ರಮ: ಹಂಪಿಗೆ ವಿದೇಶಿ ಹೂಡಿಕೆದಾರರ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 7:50 IST
Last Updated 22 ಫೆಬ್ರುವರಿ 2025, 7:50 IST
   

ಹೊಸಪೇಟೆ (ವಿಜಯನಗರ): ರಾಜ್ಯದ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಪರಿಚಯ ಮಾಡಿಕೊಳ್ಳುವ ಪ್ರವಾಸದ ಭಾಗವಾಗಿ ವಿದೇಶಿ ಹೂಡಿಕೆದಾರರ ತಂಡವೊಂದು ಶನಿವಾರ ಹಂಪಿಗೆ ಭೇಟಿ ನೀಡಿತು.

ಕರ್ನಾಟಕ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಎಕ್ಸ್‌ಪೊ (ಕೆಐಟಿಇ) ಫ್ಯಾಮ್‌ ಟೂರ್‌–2025ರ ದ್ವಿತೀಯ ಆವೃತ್ತಿಯ ಭಾಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರವಾಸಿ ತಾಣ ವೀಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಹಂಪಿಗೆ ಶನಿವಾರ ಬಂದಿಳಿದ ವಿದೇಶಿಯರ ತಂಡ, ಹಂಪಿಯ ಸೊಬಗನ್ನು ಕಂಡು ಬೆರಗಾಯಿತು.

ಹಂ‍ಪಿಯ ಪ್ರಸಿದ್ಧ ಸ್ಥಳಗಳಾದ ವಿಜಯ ವಿಠಲ ದೇವಸ್ಥಾನ, ಕಲ್ಲಿನ ರಥ, ಸಂಗೀತ ಮಂಟಪ, ಕಮಲ ಮಹಲ್, ಗಜ ಶಾಲೆ, ರಾಣಿ ಸ್ನಾನ ಗೃಹಗಳನ್ನು ಈ ತಂಡ ವೀಕ್ಷಿಸಿತು. ಹಂಪಿಯ ಶ್ರೀಮಂತ ಕಲೆ ಮತ್ತು ಸಂಸ್ಕೃತಿಗೆ ಮನಸೋತ ವಿದೇಶಿ ಹೂಡಿಕೆದಾರರು, ಇಲ್ಲಿನ ಸ್ಮಾರಕಗಳನ್ನು ವೀಕ್ಷಿಸಿ ಖುಷಿಗೊಂಡರು. ಕಲ್ಲಿನ ರಥದ ಮುಂಭಾಗ ನಿಂತು ₹50ರ  ನೋಟು ಹಿಡಿದು ಅದರಲ್ಲಿನ ಚಿತ್ರವನ್ನು ತೋರಿಸುತ್ತ ಸಂಭ್ರಮಿಸಿದರು.

ADVERTISEMENT

ಆಸ್ಟ್ರೇಲಿಯಾ, ರಷ್ಯಾ, ಅಮೆರಿಕ, ಮಲೇಷ್ಯಾ, ಫಿಲಿಪ್ಪೀನ್ಸ್‌, ಶ್ರೀಲಂಕಾ, ಬೆಲ್ಜಿಯಂ, ಇಟಲಿ, ಲಾಟ್ವಿಯಾ, ಅರ್ಜೆಂಟಯನಾ ದೇಶಗಳ ಹೂಡಿಕೆದಾರರು ಹಂಪಿಯ ಜೊತೆಗೆ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ,  ಲಕ್ಕುಂಡಿ, ಮೈಸೂರು, ವನ್ಯಧಾಮ, ಗಿರಿಧಾಮಗಳು, ಕರಾವಳಿ ಭಾಗಗಳಿಗೆ ಭೇಟಿ ನೀಡಲಿದ್ದಾರೆ.

‘19 ಮಂದಿ ವಿದೇಶಿ ಹೂಡಿಕೆದಾರರು ಮತ್ತು ಇಬ್ಬರು ಭಾರತೀಯ ಹೂಡಿಕೆದಾರರು ತಂಡದಲ್ಲಿದ್ದಾರೆ. ರಾಜ್ಯದ ಇತರ ಸ್ಥಳಗಳಿಗೆ ತೆರಳಿ ಇದೇ 25ಕ್ಕೆ ಇವರು ಮತ್ತೊಮ್ಮೆ ಹಂಪಿಗೆ ಬರಲಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ  ಪ್ರಭುಲಿಂಗ ಎಸ್‌.ತಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂಡಿಕೆಗೆ ಅವಕಾಶ ಪರಿಶೀಲನೆ:

ಈ ಪ್ರವಾಸದ ಜತೆಜತೆಗೆ ರಾಜ್ಯದ ಪ್ರವಾಸಿ ತಾಣಗಳ ವೈವಿಧ್ಯತೆ, ಇಲ್ಲಿನ ಸಂಸ್ಕೃತಿ, ಪರಂಪರೆ, ಪರಿಸರ ಪೂರಕ ಪ್ರವಾಸೋದ್ಯಮ ಅವಕಾಶ, ಸಾಹಸ ಪ್ರವಾಸೋದ್ಯಮ ಸಾಧ್ಯತೆ ಮೊದಲಾದ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಮೂಲಕ ಹೂಡಿಕೆ ಅವಕಾಶಗಳ ಕುರಿತು ಬಳಿಕ ಚರ್ಚೆ, ನಿರ್ಧಾರಗಳು ಆಗಲಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರವಾಸಿ ಮಾರ್ಗದರ್ಶಿಗಳು ಹಂಪಿಯ ಇತಿಹಾಸವನ್ನು ಗಣ್ಯರಿಗೆ ಪರಿಚಯಿಸಿದರು. ಇಲಾಖೆಯ ಪರವಾಗಿ ಶರತ್‌ ಮತ್ತು ಮಂಜುನಾಥ್‌ ಅವರು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.