ADVERTISEMENT

6 ಪರಿಸರ ಸೂಕ್ಷ್ಮ ವಲಯ: ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ಒ‍ಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 16:27 IST
Last Updated 11 ಅಕ್ಟೋಬರ್ 2023, 16:27 IST
<div class="paragraphs"><p>ಪರಿಸರ ಸೂಕ್ಷ್ಮ ವಲಯ </p></div>

ಪರಿಸರ ಸೂಕ್ಷ್ಮ ವಲಯ

   

ಬೆಂಗಳೂರು: ರಾಜ್ಯದ ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿ ಆರು ಅರಣ್ಯ ವಲಯಗಳನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಪರಿಸರ ಸೂಕ್ಷ್ಮ ವಲಯಗಳನ್ನು ನಿರ್ಣಯಿಸುವ ಕುರಿತು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಂಪುಟ ಉಪ ಸಮಿತಿ, ಈ ತೀರ್ಮಾನಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. 

ADVERTISEMENT

ಬುಧವಾರ ಸಚಿವ ಸಂಪುಟ ಉಪ ಸಮಿತಿಯ ಸಭೆ ನಡೆಯಿತು. ಆರು ಅರಣ್ಯ ವಲಯಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಸಚಿವ ಸಂಪುಟ ಸಭೆಗೆ ಪ್ರಸ್ತಾವ ಸಲ್ಲಿಸಲು ಅನುಮೋದನೆ ನೀಡಲಾಯಿತು ಎಂದು ಖಂಡ್ರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ಕೇಂದ್ರ ಅರಣ್ಯ, ಪರಿಸರ ಸಚಿವಾಲಯ ಮಾರ್ಗಸೂಚಿಗಳ ಅನ್ವಯ ಪರಿಸರ ಸೂಕ್ಷ್ಮವಲಯಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು, ನಿರ್ಬಂಧಿತ ಚಟುವಟಿಕೆಗಳು ಮತ್ತು ನಿಷೇಧಿತ ಚಟುವಟಿಕೆಗಳು ಎಂದು ವರ್ಗೀಕರಿಸಲಾಗಿದೆ. ಗೋದವರ್ಮನ್ ವಿರುದ್ಧ ಭಾರತ ಸರ್ಕಾರದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಸಂರಕ್ಷಿತ ವಲಯಗಳಾದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಧಾಮಗಳ ಸುತ್ತಮುತ್ತ ಕನಿಷ್ಠ 1 ಕಿ.ಮೀನಿಂದ ಗರಿಷ್ಠ 23.06 ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವುದು ಅಗತ್ಯ ಎಂದು ಅಧಿಕಾರಿಗಳು ಸಭೆಗೆ ವಿವರ ನೀಡಿದರು.

ಈ ವಲಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು, ವಸತಿ, ಶಾಲೆ, ಆಸ್ಪತ್ರೆ, ರಸ್ತೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಸಂರಕ್ಷಿತ ವಲಯದ ವ್ಯಾಪ್ತಿಯನ್ನು ಶಿಫಾರಸು ಮಾಡಲಾಗಿದೆ.

ಉದಾಹರಣೆಗೆ ನಾಗರಹೊಳೆಯಲ್ಲಿ ಹುಲಿ ಸಂರಕ್ಷಿತ ವಲಯಕ್ಕೆ ಹೊಂದಿಕೊಂಡು 101 ಗ್ರಾಮಗಳಿವೆ. ಇಲ್ಲಿ ಸಂರಕ್ಷಿತ ವಲಯ ಕನಿಷ್ಠ 1 ಕಿ.ಮೀ ವ್ಯಾಪ್ತಿಯಿಂದ ಆರಂಭಗೊಂಡು 23.6 ಕಿ.ಮೀ.ವರೆಗೆ ಇರುತ್ತದೆ. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶವಿರುತ್ತದೆ ಎಂಬ ಸಭೆಗೆ ವಿವರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.