ADVERTISEMENT

ಅರಣ್ಯ ಭೂಮಿ ಕಬಳಿಸಿದರೆ ಅಪರಾಧ ಪ್ರಕರಣ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:38 IST
Last Updated 28 ನವೆಂಬರ್ 2025, 15:38 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಯತ್ನಿಸುವವರ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ಅಪರಾಧ ಪ್ರಕರಣಗಳನ್ನು ದಾಖಲಿಸಿ, ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಸಂಬಂಧಿತ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಭೂಮಿ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಅವರು, ನ್ಯಾಯಾಲಯಗಳಲ್ಲಿ ಅರಣ್ಯ ಇಲಾಖೆಗೆ ಹಿನ್ನಡೆ ಆಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಂಗಳೂರಿನ ಬಿ.ಎಂ.ಕಾವಲು ಅರಣ್ಯ ಪ್ರದೇಶದ 532 ಎಕರೆಯಷ್ಟು ಭೂಮಿಯನ್ನು ಹಾಸನ ವಿಶೇಷ ಜಿಲ್ಲಾಧಿಕಾರಿ ತಮಗೆ ಮಂಜೂರು ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ಪರವಾಗಿ ಆದೇಶ ಪಡೆದಿದ್ದಾರೆ. 2025ರ ಆಗಸ್ಟ್‌ 13ರಂದು ಎಂ.ಬಿ.ನೇಮಣ್ಣ ಗೌಡ ಎನ್ನುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 30ರಂದು ಅವರ ಪರವಾಗಿ ತೀರ್ಪು ಬಂದಿದೆ. ಇಷ್ಟು ತ್ವರಿತವಾಗಿ ತೀರ್ಪು ಹೇಗೆ ದೊರೆಯಿತು’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ADVERTISEMENT

‘ಬೆಂಗಳೂರಿನ ಅರಣ್ಯ ಪ್ರದೇಶವನ್ನು ಹಾಸನದ ವಿಶೇಷ ಜಿಲ್ಲಾಧಿಕಾರಿ ಮಂಜೂರು ಮಾಡಲು ಸಾಧ್ಯವಿಲ್ಲ. ಇನಾಂ ರದ್ದತಿ ಕಾನೂನಿನ ಅಡಿ ಒಬ್ಬರೇ ವ್ಯಕ್ತಿಗೆ 532 ಎಕರೆ ಮಂಜೂರು ಮಾಡಲು ಅವಕಾಶವಿಲ್ಲ ಎಂಬ ಸರಳ ತಾಂತ್ರಿಕ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲು ಆಗುವುದಿಲ್ಲವೇ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸುಮಾರು ₹25,000 ಕೋಟಿ ಮೌಲ್ಯದ ಈ ಜಮೀನನ್ನು ಉಳಿಸಿಕೊಳ್ಳಲು ನ್ಯಾಯಾಲಯಕ್ಕೆ ತಕ್ಷಣವೇ ಮೇಲ್ಮನವಿ ಸಲ್ಲಿಸಿ. ರಾಜ್ಯದ ಇತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಕಬಳಿಕೆ ಪ್ರಕರಣಗಳಲ್ಲಿ ಸಮರ್ಥ ವಕೀಲರನ್ನು ನೇಮಿಸಿಕೊಳ್ಳಿ. ಅವರಿಂದ ಪ್ರತಿ ವಾರ ಸ್ಥಿತಿಗತಿ ವರದಿ ಪಡೆದುಕೊಳ್ಳಿ’ ಎಂದು ಸೂಚಿಸಿದ್ದಾರೆ.

‘ಕಬಳಿಕೆ ಪ್ರಕರಣಗಳಲ್ಲಿ ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ್ದರೂ, ಅದನ್ನು ಪಾಲಿಸದೇ ಇರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ’ ಎಂದೂ ತಾಕೀತು ಮಾಡಿದ್ದಾರೆ.

* ನ್ಯಾಯಾಲಯಗಳಲ್ಲಿ ಅರಣ್ಯ ಇಲಾಖೆಗೆ ಹಿನ್ನಡೆ: ಅಧಿಕಾರಿಗಳಿಗೆ ತರಾಟೆ

* ಹಿನ್ನಡೆಯಾದ ಪ್ರಕರಣಗಳಲ್ಲಿ ತಕ್ಷಣವೇ ಮೇಲ್ಮನವಿ ಸಲ್ಲಿಸಲು ಸೂಚನೆ

* ಅರಣ್ಯ ಭೂಮಿ ರಕ್ಷಿಸದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.