ADVERTISEMENT

ಕೆಪಿಸಿಸಿ ‘ವಾರ್‌ ರೂಮ್‌’ಗೆ ಸೆಂಥಿಲ್‌ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 15:49 IST
Last Updated 8 ಜುಲೈ 2022, 15:49 IST
ಸಸಿಕಾಂತ್‌ ಸೆಂಥಿಲ್‌
ಸಸಿಕಾಂತ್‌ ಸೆಂಥಿಲ್‌   

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪರವಾಗಿ ರಾಜಕೀಯ ತಂತ್ರಗಾರಿಕೆ ರೂಪಿಸಲಿರುವ ಕೆಪಿಸಿಸಿ ‘ವಾರ್‌ ರೂಮ್‌’ ಅಧ್ಯಕ್ಷರನ್ನಾಗಿ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಗುರುವಾರ ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಚುನಾವಣಾ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಉಸ್ತುವಾರಿಯಾಗಿ ಚುನಾವಣಾ ತಂತ್ರಗಾರ ಸುನೀಲ್‌ ಕನುಗೋಲು ಅವರೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

‘ವಾರ್‌ ರೂಮ್‌’ನ ದೈನಂದಿನ ಚಟುವಟಿಕೆಗಳನ್ನು ಸಂಯೋಜಿಸುವ ಜವಾಬ್ದಾರಿಯನ್ನು ಕೆಪಿಸಿಸಿ ಉಪಾಧ್ಯಕ್ಷ ಸೂರಜ್‌ ಹೆಗ್ಡೆ ಮತ್ತು ಪ್ರಧಾನ ಕಾರ್ಯದರ್ಶಿ ಮೆಹ್ರೋಝ್‌ ಖಾನ್‌ ಅವರಿಗೆ ನೀಡಲಾಗಿದೆ.

ADVERTISEMENT

ಕೆಪಿಸಿಸಿ ಮಾಧ್ಯಮ ಸಮಿತಿಗೆ ಪ್ರಿಯಾಂಕ್‌ ಅಧ್ಯಕ್ಷ

ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸಮಿತಿಯನ್ನು ಪುನರ್‌ರಚಿಸಿದ್ದು, ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಹ ಅಧ್ಯಕ್ಷರಾಗಿ ರಾಜ್ಯಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌, ಮುಖ್ಯ ವಕ್ತಾರ ಮತ್ತು ಸಮಿತಿಯ ಸಂಚಾಲಕರನ್ನಾಗಿ ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌, ಉಪಾಧ್ಯಕ್ಷರನ್ನಾಗಿ ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಮತ್ತು ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಗುರುವಾರ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ಲಾವಣ್ಯಾ ಬಲ್ಲಾಳ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕವಿತಾ ರೆಡ್ಡಿ, ಡಾ. ನಾಗಲಕ್ಷ್ಮಿ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹದೇವ್‌ ಅವರ ಮಗಳು ಐಶ್ವರ್ಯಾ ಮಹದೇವ್‌ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.