ವನ್ಯಜೀವಿ ಧಾಮ
(ಸಾಂಕೇತಿಕ ಚಿತ್ರ)
ಭದ್ರಾ, ಉತ್ತರೆಗುಡ್ಡ, ಅರಸೀಕೆರೆ, ಬಂಕಾಪುರ ಧಾಮ: ಸಂಪುಟ ಉಪ ಸಮಿತಿ ಒಪ್ಪಿಗೆ
ಬೆಂಗಳೂರು: ಚಿಕ್ಕಮಗಳೂರಿನ ಭದ್ರಾ, ಚಿತ್ರದುರ್ಗದ ಉತ್ತರೆಗುಡ್ಡ, ಕೊಪ್ಪಳದ ಬಂಕಾಪುರ ತೋಳ ವನ್ಯಜೀವಿಧಾಮ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕರಡಿ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ ಮಾಡಲು ಸಂಪುಟ ಉಪಸಮಿತಿ ಗುರುವಾರ ಒಪ್ಪಿಗೆ ನೀಡಿತು.
ಪರಿಸರ ಸೂಕ್ಷ್ಮ ವಲಯ ಕುರಿತು ಅಧಿಸೂಚನೆ ಹೊರಡಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆಯ ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸಂಪುಟಕ್ಕೆ ಶಿಫಾರಸು ಮಾಡಲಾಗುವುದು. ನಂತರ ಕೇಂದ್ರಕ್ಕೆ ಕಳುಹಿಸಲಾಗುವುದು. ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ರೈತರು, ಸ್ಥಳೀಯರಿಗೆ ತೊಡಕಾಗುವುದಿಲ್ಲ ಎಂದರು.
ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಮೃಗ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ರಾಜ್ಯದ ನಾಲ್ಕು ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಕಿ.ಮೀನಿಂದ 10 ಕಿ.ಮೀವರೆಗೆ ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಲಾಗುತ್ತದೆ. ಜನವಸತಿ ಮತ್ತು ಪಟ್ಟಾ ಜಮೀನು ಇರುವ ಪ್ರದೇಶದಲ್ಲಿ ಕೇವಲ ಒಂದು ಕಿ.ಮೀ ಮಾತ್ರವೇ ಘೋಷಿಸುವ ಕಾರಣ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿ ಅನ್ವಯ ಪರಿಸರ ಸೂಕ್ಷ್ಮ ವಲಯದಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಮತ್ತು ನಿಷೇಧಿತ ಚಟುವಟಿಕೆಗಳೆಂದು ವರ್ಗೀಕರಿಸಲಾಗಿದೆ. ಉತ್ತೇಜಕ ಚಟುವಟಿಕೆಗಳಲ್ಲಿ ಹಾಲಿ ಇರುವ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಸೌರ ಫಲಕ ಅಳವಡಿಕೆಯಂತಹ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ ಎಂದರು.
ಪರಿಸರ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಹೋಟೆಲ್, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡ, ಕಟ್ಟಡ ನಿರ್ಮಾಣ, ವಿದ್ಯುತ್ ಕೇಬಲ್ ಅಳವಡಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾದೇಶಿಕ ಆಯುಕ್ತರ ಸಮಿತಿಯಿಂದ ಅನುಮತಿ ಪಡೆಯಬೇಕು. ಅಪಾಯಕಾರಿ ತ್ಯಾಜ್ಯ ಹೊರಹಾಕುವ, ಶಬ್ದ, ವಾಯು ಮಾಲಿನ್ಯದ ಕೆಂಪು ಪ್ರವರ್ಗದ ಕೈಗಾರಿಕೆ. ವಾಣಿಜ್ಯ ಗಣಿಗಾರಿಕೆ, ಸಾಮಿಲ್ ಸ್ಥಾಪನೆ ನಿಷಿದ್ಧ. ಮರ ಕಡಿಯಲು ವೃಕ್ಷ ಸಂರಕ್ಷಣಾ ಕಾಯ್ದೆ ಅಡಿ ಪೂರ್ವಾನುಮತಿ ಪಡೆಯಬೇಕಿದೆ ಎಂದು ವಿವರ ನೀಡಿದರು.
ಸಮಿತಿ ಸದಸ್ಯರಾದ ಇಂಧನ ಸಚಿವ ಕೆ.ಜೆ. ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.