ADVERTISEMENT

ಲಾಕ್‌ಡೌನ್‌ನಿಂದ ಮಾರಾಟ ಕಷ್ಟ: ಮನೆ ಮನೆಗೆ ಉಚಿತ ಕಲ್ಲಂಗಡಿ ಹಣ್ಣು

ವ್ಯರ್ಥ ಮಾಡುವ ಬದಲು ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 20:07 IST
Last Updated 2 ಏಪ್ರಿಲ್ 2020, 20:07 IST
ಮರಿಯಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಿದ್ರಿ ಸತೀಶ್ ಅವರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಗುರುವಾರ ಬೆಳಿಗ್ಗೆ ಪಟ್ಟಣದ ಐದನೇ ವಾರ್ಡ್‍ನಲ್ಲಿ ಮನೆ ಮನೆಗೆ ಹಂಚಿದರು.
ಮರಿಯಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಿದ್ರಿ ಸತೀಶ್ ಅವರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಗುರುವಾರ ಬೆಳಿಗ್ಗೆ ಪಟ್ಟಣದ ಐದನೇ ವಾರ್ಡ್‍ನಲ್ಲಿ ಮನೆ ಮನೆಗೆ ಹಂಚಿದರು.   

ಮರಿಯಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ಲಾಕ್‌ಡೌನ್‌ನಿಂದಾಗಿ ಹಣ್ಣುಗಳ ಮಾರಾಟಕ್ಕೆ ತೊಂದರೆಯಾಗಿರುವ ಬೆನ್ನಲ್ಲೇ ಅವುಗಳನ್ನು ವ್ಯರ್ಥವಾಗಿ ಚೆಲ್ಲುವ ಬದಲು ಮನೆ ಮನೆಗೆ ಹಂಚುವ ಮಾದರಿ ಕೆಲಸಕ್ಕೆ ಇಲ್ಲೊಬ್ಬರು ಮುಂದಾಗಿದ್ದಾರೆ.

ಸ್ಥಳೀಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಿದ್ರಿ ಸತೀಶ್ ತಮ್ಮ ಹೊಲದಲ್ಲಿ ಬೆಳೆದ ಸಾವಿರಾರು ಕಲ್ಲಂಗಡಿ ಹಣ್ಣುಗಳನ್ನು ಪಟ್ಟಣದ ಪ್ರತಿ ಮನೆ ಮನೆಗೂ ಉಚಿತವಾಗಿ ತಲುಪಿಸುವ ಕಾರ್ಯ ಆರಂಭಿಸಿದ್ದಾರೆ.

ಒಂದೆಡೆ ಮಾರುಕಟ್ಟೆ ಸಮಸ್ಯೆ, ಬೆಲೆಕುಸಿತ, ಸಾರಿಗೆ ಹಾಗೂ ಮಧ್ಯವರ್ತಿಗಳ ಸಮಸ್ಯೆಯಿಂದಾಗಿ, ಲಕ್ಷಾಂತರ ಮೌಲ್ಯದ ಕಲ್ಲಂಗಡಿ ಹಣ್ಣಿನ ಬೆಳೆ ನಷ್ಟವಾಗುತ್ತಿತ್ತು. ಹೀಗಾಗಿ ಅದನ್ನು ವ್ಯರ್ಥ ಮಾಡುವ ಬದಲು ಸ್ಥಳೀಯರಿಗೆ ಹಂಚಲು ಕುಟುಂಬ ಸದಸ್ಯರು ತೀರ್ಮಾನಿಸಿದೆವು ಎಂದು ಚಿದ್ರಿ ಸತೀಶ್ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸುಮಾರು 6 ಎಕರೆ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಸುಮಾರು 83 ಸಾವಿರ ಸಸಿಗಳನ್ನು ನಾಟಿ ಮಾಡಿಸಿದ್ದರು. ಇಲ್ಲಿಯವರೆಗೆ ₹ 2 ಲಕ್ಷ ಖರ್ಚು ಮಾಡಿದ್ದು, ಹೊಲದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ್ಣುಗಳಿವೆ. ಆದರೆ, ಲಾಕ್‍ಡೌನ್ ಆಗದಿದ್ದರಿಂದ ಗೋವಾ, ಬೆಂಗಳೂರು, ಕೇರಳಕ್ಕೆ ಹಣ್ಣುಗಳ ಸರಬರಾಜು ಆಗುವುದು ನಿಂತಿದೆ.

‘ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಈ ಬಾರಿ ಕಲ್ಲಂಗಡಿ ಸರಬರಾಜು ಆಗುವುದು ಕಷ್ಟಸಾಧ್ಯವಾಗಿದ್ದು, ಬೆಲೆ ಸಿಗುವುದು ಅಷ್ಟಕಷ್ಟೆ. ಆದ್ದರಿಂದ ಬೆಳೆ ಹಾಳಾಗಿ ಹತಾಶರಾಗುವುದಕ್ಕಿಂತ ಪ್ರತಿ ಮನೆ ಮನೆಗೂ ಹಣ್ಣುಗಳನ್ನು ಹಂಚುವಂತೆ ತಾಯಿ ಚಿದ್ರಿ ಭಾಗ್ಯಮ್ಮ ಸಲಹೆ ನೀಡಿದ್ದಾರೆ. ಹೀಗಾಗಿ ಗುರುವಾರದಿಂದ ಪಟ್ಟಣದ ಪ್ರತಿ ಮನೆಗೂ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ’ ಎಂದರು ಚಿದ್ರಿ ಸತೀಶ್.

‘ಕೆಲವೊಮ್ಮ ಇಂತಹ ಸಂದರ್ಭಗಳು ಬರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೆ ಬೆಳೆ ನಷ್ಟ ಹಾಗೂ ಬೆಳೆದ ಬೆಳೆಯನ್ನು ಮಣ್ಣು ಅಥವಾ ತಿಪ್ಪೆಪಾಲು ಮಾಡದೇ ರೈತರು ಅದನ್ನು ತಮ್ಮ ಹಳ್ಳಿಯ ಜನರಿಗಾದರೂ ವಿತರಿಸಬೇಕು, ಆಗ ಬೆಳೆ ಬೆಳೆದಿದ್ದಕ್ಕೂ ಸಾರ್ಥಕ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.