ಕೊಲ್ಹಾಪುರ-ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಅಶೋಕ
ಬೆಂಗಳೂರು: ಲಿಂಗಾಯತ ಸ್ವಾಮಿಗಳ ಬಗ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಬಗ್ಗೆ ಬಹಿರಂಗ ವೇದಿಕೆ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಹಾರಾಷ್ಟ್ರದ ಕೊಲ್ಹಾಪುರ-ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿದ್ದಾರೆ.
ಅವಹೇಳನಕಾರಿ ಮಾತಿನ ಹಿನ್ನೆಲೆಯಲ್ಲಿ ಸ್ವಾಮೀಜಿ ಮೇಲೆ ದಾಳಿ ಆಗಬಹುದು ಎಂಬ ಪೊಲೀಸ್ ಗುಪ್ತಚರ ಮಾಹಿತಿ ಆಧರಿಸಿ ವಿಜಯಪುರ ಡಿ.ಸಿ, ಸ್ವಾಮೀಜಿ ಅವರು ಮುಂದಿನ ಎರಡು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶ ಮಾಡಬಾರದು ಎಂದು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಕ್ಸ್ ಪೋಸ್ಟ್ ಮಾಡಿರುವ ಆರ್. ಅಶೋಕ, ರಾಜ್ಯದ ಲಜ್ಜೆಗೇಡಿ ಕಾಂಗ್ರೆಸ್ ಸರ್ಕಾರ, ಮತ್ತೊಮ್ಮೆ ಹಿಂದೂ ಧರ್ಮ ಗುರುಗಳ ದನಿಯನ್ನ ಅಡಗಿಸುವ ದುಸ್ಸಾಹಸಕ್ಕೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿಷೇಧ ಭಾಗ್ಯ! ಕೊಲ್ಹಾಪುರ-ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ಎರಡು ತಿಂಗಳವರೆಗೆ ವಿಜಯಪುರ ಜಿಲ್ಲೆಗೆ ಬರದಂತೆ ನಿರ್ಬಂಧ ಆದೇಶವನ್ನು ಹೊರಡಿಸಿರುವ ರಾಜ್ಯದ ಲಜ್ಜೆಗೇಡಿ ಕಾಂಗ್ರೆಸ್ ಸರ್ಕಾರ, ಮತ್ತೊಮ್ಮೆ ಹಿಂದೂ ಧರ್ಮ ಗುರುಗಳ ದನಿಯನ್ನ ಅಡಗಿಸುವ ದುಸ್ಸಾಹಸಕ್ಕೆ ಕೈಹಾಕಿದೆ. ಈ ಹಿಂದೆ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ದಿವಂಗತ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ ಐಆರ್ ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈಗ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಮೇಲೆ ನಿಷೇಧ ಹೇರುವ ಮೂಲಕ ಪಕ್ಷಕ್ಕೆ ವಾಕ್ ಸ್ವಾತಂತ್ರ್ಯ, ಸಂವಿಧಾನದಲ್ಲಿ ನಂಬಿಕೆಯಿಲ್ಲ ಎನ್ನುವುದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ- ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಆದೇಶ ಹೊರಡಿಸಿದ್ದಾರೆ.
ಸ್ವಾಮೀಜಿ ಅವರಿಗೆ ಇದೇ ಅಕ್ಟೋಬರ್ 16ರಿಂದ ಡಿಸೆಂಬರ್ 16ರ ವರೆಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ, 'ಮುಖ್ಯಮಂತ್ರಿ ಕೃಪಾ ಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ ಎಂಬ ನಾಟಕ ಮಂಡಳಿ ಕಲಾವಿದರು ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ಬಸವ ಸಂಸ್ಕೃತಿ ಉತ್ಸವ ಎಂದು ತಿರುಗಾಡಿದರು. ಈ ಸಂದರ್ಭದಲ್ಲಿ ಅವರು, 'ದೇವರು ಗುಡಿಯಲ್ಲಿ ಇಲ್ಲ, ಗುಡಿಗೆ ಹೋಗಬೇಡಿ, ಮನೆಯಲ್ಲಿರುವ ದೇವರನ್ನು ಹೊಳೆಗೆ ಹಾಕಿ, ಹೋಟೆಲ್ ಗಳಿಗೆ ಹೋಗಿ ದಾರು ಕುಡಿಯಿರಿ, ಮಾಂಸ ತಿನ್ನಿರಿ, ಅರಾಮಗಿರಿ' ಎಂದು ಹೇಳಿದ್ದಾರೆ. ಅವರನ್ನು ಮುಂದೆ ಕೂರಿಸಿಕೊಂಡು ಆ ಸೂಳೆಮಕ್ಕಳಿಗೆ ನಾನೇ ಬುದ್ದಿ ಹೇಳಬೇಕು, ಹಿಡಿದು ಮೆಟ್ಟಲ್ಲಿ ಹೊಡೆಯಬೇಕು' ಎಂದು ಅವಹೇಳನಕಾರಿಯಾಗಿ ವಾಗ್ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.