ADVERTISEMENT

ರಾಷ್ಟ್ರ ಮಟ್ಟದಲ್ಲಿ ಪಸರಿಸಿದ ಗದುಗಿನ ಗಂಧ

ಹಾಕಿ, ಕುಸ್ತಿ, ಸೈಕ್ಲಿಂಗ್‌ ಕ್ರೀಡೆಯಲ್ಲಿ ಮಿಂಚುತ್ತಿರುವ ಜಿಲ್ಲೆಯ ಕ್ರೀಡಾಪಟುಗಳು

ಸತೀಶ ಬೆಳ್ಳಕ್ಕಿ
Published 10 ಆಗಸ್ಟ್ 2022, 22:45 IST
Last Updated 10 ಆಗಸ್ಟ್ 2022, 22:45 IST
ಗದಗ ನಗರದಲ್ಲಿರುವ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣ
ಗದಗ ನಗರದಲ್ಲಿರುವ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣ   

ಗದಗ: ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಗದುಗಿನ ಪರಂಪರೆ ಶ್ರೀಮಂತವಾಗಿದೆ. ಅದು ಈಗ ಕ್ರೀಡಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದೆ. ಇಲ್ಲಿನ ಕ್ರೀಡಾಪಟುಗಳು ಗದುಗಿನ ಗಂಧವನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸುತ್ತಿದ್ದಾರೆ.

ಹಾಕಿ, ಕುಸ್ತಿ, ಸೈಕ್ಲಿಂಗ್‌ ಕ್ರೀಡೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಇಲ್ಲಿನ ಕುಸ್ತಿಪಟುಗಳ ಪಟ್ಟುಗಳಿಗೆ ರಾಜ್ಯ, ಹೊರರಾಜ್ಯಗಳ ಕ್ರೀಡಾಪಟುಗಳು ಚಿತ್‌ ಆಗಿದ್ದಾರೆ. ಈ ಮೂಲಕ ಗದಗ ಜಿಲ್ಲೆ ಕುಸ್ತಿಯ ತವರು ಎಂದೇ ಜನಜನಿತವಾಗಿದೆ. ಅಂತೆಯೇ, ಹಾಕಿ ಕ್ರೀಡೆಯಲ್ಲೂ ಗದಗ ಜಿಲ್ಲೆಯ ಛಾಪು ರಾಷ್ಟ್ರಮಟ್ಟದಲ್ಲಿ ಮೂಡಿದೆ.

ಬೆಂಗಳೂರು, ಮೈಸೂರು ಹೊರತುಪಡಿಸಿದರೆ ಅತಿಹೆಚ್ಚು ಕ್ರೀಡಾ ಆಸ್ತಿಯನ್ನು ಹೊಂದಿರುವ ಜಿಲ್ಲೆ ಗದಗ. ಕ್ರೀಡಾಪಟುಗಳ ಉನ್ನತಿಗೆ ಬೇಕಿರುವ ಸೌಕರ್ಯಗಳು ಇಲ್ಲಿ ಸಾಕಷ್ಟಿವೆ. ಆದರೆ, ಆ ಸೌಕರ್ಯಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು. ಈ ಮೂಲಕ ಗದುಗಿನ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕು ಎಂಬ ಉದ್ದೇಶದೊಂದಿಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ.

ADVERTISEMENT

ಗದಗ ನಗರದಲ್ಲಿ ಸುಸಜ್ಜಿತ ಕ್ರೀಡಾಂಗಣಗಳಿವೆ. ಜಿಲ್ಲಾ ಕ್ರೀಡಾಂಗಣದಲ್ಲಿ ಓಟದ ಸ್ಪರ್ಧೆ ಹೊರತು ಪಡಿಸಿ, ಉಳಿದೆಲ್ಲಾ ಕ್ರೀಡೆಗಳನ್ನು ನಡೆಸುವ ಸವಲತ್ತುಗಳಿವೆ. ಬ್ಯಾಡ್ಮಿಂಟನ್‌, ಕುಸ್ತಿ, ಸೈಕ್ಲಿಂಗ್‌, ಬಾಸ್ಕೆಟ್‌ಬಾಲ್‌, ಫುಟ್‌ಬಾಲ್‌ ಜತೆಗೆ ಖೇಲೋ ಇಂಡಿಯಾದ ತರಬೇತುದಾರರು ಇದ್ದಾರೆ. ಕ್ರೀಡಾ ಹಾಸ್ಟೆಲ್‌ ಸೌಲಭ್ಯವಿದ್ದು, 100 ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

‘ಗದಗ ಜಿಲ್ಲೆಯಲ್ಲಿ ಕಸುವು ತುಂಬಿದ ಸಾಕಷ್ಟು ಮಂದಿ ಯುವ ಕ್ರೀಡಾಪಟುಗಳಿದ್ದಾರೆ. ಕ್ರೀಡಾ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಇರುತ್ತಾರೆ. ಅವರು ಪಿಯು, ಪದವಿಗೆ ಬೇರೆ ಹಾಸ್ಟೆಲ್‌ಗಳಿಗೆ ತೆರಳುತ್ತಾರೆ. ಮುಂದೆ ಮೆಡಲ್‌ ಮಾಡುತ್ತಾರೆ. ಆ ಕೀರ್ತಿ ಬೇರೆಯವರಿಗೆ ಸಿಗುತ್ತಿದೆ. ನಮ್ಮ ಕ್ರೀಡಾ ಹಾಸ್ಟೆಲ್‌ ಸ್ಥಿತಿಗತಿ ಇದೆ ಚೆನ್ನಾಗಿದೆ. ಈಗ 100 ಮಂದಿಗೆ ಮಾತ್ರ ಅವಕಾಶ ಇದ್ದು, ಆ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸಿ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಇಲ್ಲೇ ಉಳಿಯುವ ಅವಕಾಶ ಮಾಡಿಕೊಟ್ಟರೆ ಜಿಲ್ಲೆ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಬಹುದು. ನಾವು ಮಾಡಿದ ಪ್ರಯತ್ನ ನಮ್ಮ ಕಣ್ಣಿಗೆ ಕಾಣಿಸಬೇಕಾದರೆ, ಅವರು ನಮ್ಮಲ್ಲೇ ಉಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡುತ್ತಾರೆ ವಿಠ್ಠಲ ಜಾಬಗೌಡರ.

ಜಿಲ್ಲೆಯ ತಾಲ್ಲೂಕು ಕ್ರೀಡಾಂಗಣಗಳ ನಿರ್ವಹಣೆಗೆ ಸರ್ಕಾರದ ಅನುದಾನದ ಅವಶ್ಯಕತೆ ಇದೆ. ನೂತನ ತಾಲ್ಲೂಕುಗಳಾದ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮವಹಿಸಬೇಕಿದೆ. ಜಿಲ್ಲೆಯ ಕ್ರೀಡಾ ಆಸ್ತಿಯ ರಕ್ಷಣೆಗೆ ಸಿಬ್ಬಂದಿಯ ಕೊರತೆ ಇದೆ. ಹೊರಗುತ್ತಿಗೆ ಆಧಾರದಲ್ಲಿ 43 ಮಂದಿ ನೇಮಿಸಿಕೊಳ್ಳಲು ಅವಕಾಶ ನೀಡುವಂತೆ ಕ್ರೀಡಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ಅನುಮೋದನೆ ಸಿಗುವ ಭರವಸೆ ಇದೆ.

ಜಿಲ್ಲೆಯಲ್ಲಿ ಉತ್ತಮ ಕ್ರೀಡಾ ಸೌಲಭ್ಯವಿದೆ. ಹಾಕಿ ಕ್ರೀಡೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನೆರವಾಗುವಂತೆ ಹಾಕಿ ಕ್ರೀಡಾಂಗಣ ಸಜ್ಜುಗೊಳಿಸಲಾಗಿದೆ. ಅದು ಸದ್ಯದಲ್ಲೇ ಬಳಕೆಗೆ ಮುಕ್ತವಾಗಲಿದ್ದು, ಜಿಲ್ಲೆಯ ಹಾಕಿ ಕ್ರೀಡಾಪಟುಗಳಿಗೆ ಬಲ ತುಂಬಲಿದೆ.

ಸ್ಟೇಡಿಯಂ ಪೇ ಅಂಡ್‌ ಪ್ಲೇಗೆ ಸಿಗದ ಬೆಂಬಲ

ಕ್ರೀಡಾಂಗಣಗಳ ಉತ್ತಮ ನಿರ್ವಹಣೆಗಾಗಿ ಸರ್ಕಾರ ಪೇ ಅಂಡ್‌ ಪ್ಲೇ ಯೋಜನೆ ಜಾರಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ಈ ಯೋಜನೆಗೆ ಬಳಕೆದಾರರಿಂದ ಬೆಂಬಲ ಸಿಕ್ಕಿಲ್ಲ.

‘ಕ್ರೀಡಾಂಗಣ ಬಳಸುವವರಿಂದ ಕನಿಷ್ಠ ₹250ರಿಂದ ₹350 ಸಂಗ್ರಹಿಸಬೇಕಿದೆ. ಹಣ ಕೇಳಿದರೆ ನಾವು ಶಾಸಕರು, ಸಂಸದರಿಂದ ಹೇಳಿಸುವುದಾಗಿ ಹೇಳುತ್ತಾರೆ. ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯಕ್ಕಾಗಿ ₹350 ಹಣ ಕೊಡಲು ಹಿಂದೆ ಮುಂದೆ ನೋಡುತ್ತಾರೆ’ ಎಂದು ಬೇಸರಿಸುತ್ತಾರೆ ಅಧಿಕಾರಿಗಳು.

‘ಸ್ವಂತ ಖುಷಿ, ಆರೋಗ್ಯಕ್ಕಾಗಿ ಕ್ರೀಡಾಂಗಣಕ್ಕೆ ಬರುವ ಅವರು, ಆರೋಗ್ಯ ತಪ್ಪಿದರೆ ವೈದ್ಯರಿಗೆ ₹1000 ಕೊಟ್ಟು ಬರುತ್ತಾರೆ. ಆದರೆ, ಪೇ ಅಂಡ್‌ ಪ್ಲೇಗೆ ಹಣ ಕೊಡಿ ಎಂದು ಮನವಿ ಮಾಡಿದರೆ ಒಪ್ಪುವುದಿಲ್ಲ. ಸೌಲಭ್ಯ ಬಳಕೆಗೆ ಹಣ ನೀಡಲು ಒಪ್ಪದ ಅವರು ವ್ಯವಸ್ಥೆ ಸರಿ ಇಲ್ಲವೆಂದು ಶಾಸಕರಿಗೆ ದೂರು ನೀಡುತ್ತಾರೆ’ ಎಂದು ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.