ಬೆಂಗಳೂರು: ಶಾಸಕ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬುಳಾಪುರಂ ಮೈನಿಂಗ್ ಕಂಪನಿ ಪ್ರೈವೆಟ್ ಲಿಮಿಟೆಡ್ (ಒಎಂಸಿ) ಮತ್ತು ಇತರ ಕೆಲ ಕಂಪನಿಗಳು ಒಟ್ಟುಗೂಡಿ ₹1,850 ಕೋಟಿ ಮೌಲ್ಯದ (2008–2011ರ ರೂಪಾಯಿ ಡಾಲರ್ ವಿನಿಮಯದ ಮೌಲ್ಯ) ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆದು, ದೇಶೀಯ ಮಾರಾಟ ಮತ್ತು ರಫ್ತು ಮಾಡಿವೆ ಎಂಬುದನ್ನು ಲೋಕಾಯುಕ್ತದ ತನಿಖಾ ವರದಿ ಹೇಳುತ್ತದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಯು.ವಿ. ಸಿಂಗ್ ನೇತೃತ್ವದ ತನಿಖಾ ತಂಡದ ವರದಿಯನ್ನು ಆಧರಿಸಿ 2011ರಲ್ಲಿ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಅಂತಿಮ ವರದಿ ಸಿದ್ಧಪಡಿಸಿದ್ದರು. ಒಎಂಸಿ ಮೂಲಕ ಗಾಲಿ ಜನಾರ್ದನ ರೆಡ್ಡಿ, ಅವರ ಕುಟುಂಬದವರು ಮತ್ತು ಆಪ್ತರು ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಸ್ವರೂಪವನ್ನು ಈ ವರದಿಯಲ್ಲಿ ವಿವರಿಸಲಾಗಿದೆ.
ಓಬುಳಾಪುರಂ ಮೈನಿಂಗ್ ಕಂಪನಿಯ ಆಡಳಿತ ಮಂಡಳಿಯ ಸದಸ್ಯರು ಇನ್ನಷ್ಟು ಗಣಿಗಾರಿಕೆ ಕಂಪನಿಗಳನ್ನು ಆರಂಭಿಸಿದ್ದರು. ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರಿನಲ್ಲಿ ಅರುಣಾ ಮೈನಿಂಗ್ ಕಂಪನಿ (ಎಎಂಸಿ), ಸಂಬಂಧಿ ಶ್ರೀನಿವಾಸ ರೆಡ್ಡಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಆಡಳಿತ ಮಂಡಳಿ ಸದಸ್ಯರಾಗಿದ್ದ ಶ್ರೀ ಮಿನರಲ್ಸ್, ಬಸವೇಶ್ವರ ಮೈನಿಂಗ್ ಕಂಪನಿಗಳು ಒಎಂಸಿಯ ಗಣಿಗಾರಿಕೆ ಕಾರ್ಯಾಚರಣೆಗಳನ್ನೇ ನಡೆಸುತ್ತಿದ್ದವು. ಈ ಕಂಪನಿಗಳು ಮಾತ್ರವಲ್ಲದೆ ದೇವಿ ಎಂಟರ್‌ಪ್ರೈಸಸ್, ಮಧುಶ್ರೀ ಎಂಟರ್‌ಪ್ರೈಸಸ್, ಲಕ್ಷ್ಮೀ ಅರುಣಾ ಮಿನರಲ್ಸ್ ಎಂಬ ಕಂಪನಿಗಳನ್ನೂ ಆರಂಭಿಸಿದ್ದರು ಎಂದು ಈ ವರದಿ ಹೇಳುತ್ತದೆ.
ಒಎಂಸಿಗೆ ಹಂಚಿಕೆಯಾಗಿದ್ದ ಗಣಿ ಮಾತ್ರವಲ್ಲದೇ, ಆ ಗಣಿಗೆ ಹೊಂದಿಕೊಂಡಿದ್ದ ಅರಣ್ಯ ಪ್ರದೇಶದಲ್ಲೂ ಗಣಿಗಾರಿಕೆ ನಡೆಸಲಾಗಿತ್ತು. ಅರಣ್ಯ ಪ್ರದೇಶದ ಗಡಿಯಲ್ಲಿ ಇದ್ದ ಬಾಂದುಗಳನ್ನು ನಾಶ ಮಾಡಿ, ಗಡಿಯನ್ನು ಬದಲಿಸಲಾಗಿತ್ತು. ಆಂಧ್ರ ಪ್ರದೇಶದ ಗಡಿಯಲ್ಲೂ ಬಾಂದುಗಳನ್ನು ನಾಶ ಮಾಡಿ, ಗಡಿಯನ್ನು ಬದಲಿಸಲಾಗಿತ್ತು ಎಂಬ ವಿವರ ವರದಿಯಲ್ಲಿದೆ. ಅಕ್ರಮ ನಡೆದ ವೇಳೆ ಜನಾರ್ದನ ರೆಡ್ಡಿಯವರೇ ಒಎಂಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ತನಿಖೆ ಆರಂಭವಾಗುತ್ತಿದ್ದಂತೆಯೇ ಹುದ್ದೆಯನ್ನು ತ್ಯಜಿಸಿ, ನಿರ್ದೇಶಕರಾಗಿ ಮುಂದುವರಿದಿದ್ದರು.
ಒಎಂಸಿ ಕರ್ನಾಟಕ, ಗೋವಾ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಬಂದರುಗಳ ಮೂಲಕ ರಫ್ತು ಮಾಡಿದೆ. ಕರ್ನಾಟಕದ ಗಣಿಯಲ್ಲಿ ತೆಗೆದ ಅದಿರುಗಳಿಗೆ ಆಂಧ್ರ ಪ್ರದೇಶದಲ್ಲಿ ತೆಗೆದ ಅದಿರು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕರ್ನಾಟಕ ಮತ್ತು ಗೋವಾದ ಬಂದರುಗಳಿಗೆ ಕಳುಹಿಸಲಾಗಿದೆ. ಇನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಬಂದರುಗಳಿಗೆ ಸಾಗಿಸಿದ ಅದಿರಿನ ಮೂಲ ಕರ್ನಾಟಕದ್ದು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎನ್ನುತ್ತದೆ ವರದಿ.
ಜನಾರ್ದನ ರೆಡ್ಡಿ ಅವರ ಕುಟುಂಬದವರ ಕಂಪನಿಗಳು ನೇರವಾಗಿ ಅಲ್ಲದೆ, ಪರೋಕ್ಷವಾಗಿಯೂ ಅಕ್ರಮ ಗಣಿಗಾರಿಕೆ ನಡೆಸಿವೆ. ವಿವಿಧ ಕಾರಣಗಳಿಂದ ಸ್ಥಗಿತವಾಗಿರುವ ಗಣಿಗಳನ್ನು ಹುಡುಕಿ, ಅದರ ಗುತ್ತಿಗೆ ಪಡೆದಿರುವ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದವು. ಅಲ್ಲಿ ಅಕ್ರಮವಾಗಿ ತೆಗೆಯಲಾದ ಅದಿರನ್ನು ಮಾರಾಟ ಮಾಡುತ್ತಿದ್ದವು. ಜತೆಗೆ ಜನಾರ್ದನ ರೆಡ್ಡಿ ಅವರು ಆದಾಯ ತೆರಿಗೆ ವಿನಾಯತಿ ಇರುವ ದೇಶಗಳಲ್ಲಿ ಕಂಪನಿಗಳನ್ನು ಸ್ಥಾಪಿಸಿ, ಕರ್ನಾಟಕದಿಂದ ತೆಗೆದ ಅದಿರನ್ನು ಅವುಗಳಿಗೆ ರಫ್ತು ಮಾಡುತ್ತಿದ್ದರು. ಆ ಕಂಪನಿಗಳ ಮೂಲಕ ಬೇರೆ ದೇಶಗಳಿಗೆ ರಫ್ತು ಮಾಡಿ ಅಪಾರ ಪ್ರಮಾಣದ ಲಾಭ ಗಳಿಸಿದ್ದಾರೆ ಎಂಬ ವಿವರ ವರದಿಯಲ್ಲಿದೆ.
ಹಂಚಿಕೆ ಆಗದ ಪ್ರದೇಶ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ರಾಯಧನ ವಂಚಿಸಿ ಅಕ್ರಮ ಸಾಗಣೆ, ತೂಕ ಕಡಿಮೆ ತೋರಿಸಿ ಸಾಗಣೆ ಮತ್ತು ರಫ್ತು, ನಕಲಿ ಕಂಪನಿಗಳಿಗೆ ರಫ್ತು ಮಾಡಿ ಆದಾಯ ತೆರಿಗೆ ವಂಚನೆ ಮಾಡಿದ್ದಾರೆ. ಈ ಎಲ್ಲ ಅಕ್ರಮಗಳ ಮೂಲಕ ಕರ್ನಾಟಕ ಸರ್ಕಾರಕ್ಕೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ರಾಯಧನ ಮತ್ತು ತೆರಿಗೆ ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.