ADVERTISEMENT

ಸಂತ್ರಸ್ತರಿಗೆ ಮಿಡಿದ ಗಣೇಶ ಮಂಡಳಗಳು

ಸರಳವಾಗಿ ಹಬ್ಬ ಆಚರಣೆ, ನೊಂದವರಿಗೆ ನೆರವು

ಎಂ.ಮಹೇಶ
Published 3 ಸೆಪ್ಟೆಂಬರ್ 2019, 9:46 IST
Last Updated 3 ಸೆಪ್ಟೆಂಬರ್ 2019, 9:46 IST

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳು ನೆರವಿನ ಹಸ್ತ ಚಾಚಿದ್ದಾರೆ. ಈ ಬಾರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿ, ಉಳಿದ ಹಣ ದೇಣಿಗೆ ನೀಡಲು ಮುಂದಾಗಿದ್ದಾರೆ.

ಕೆಲವು ಮಂಡಳಗಳು ಪರಿಹಾರ ಕೇಂದ್ರಗಳಲ್ಲಿರುವವರಿಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ನೀಡಿದ್ದಾರೆ. ಸ್ಥಳೀಯರು ಕೂಡ ಆರ್ಥಿಕವಾಗಿ ಸಹಕರಿಸಿದ್ದಾರೆ.

ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುವ ರಾಜ್ಯದ ನಗರಗಳಲ್ಲಿ ಬೆಳಗಾವಿ ಪ್ರಮುಖವಾಗಿದೆ. ವಿಭಿನ್ನ ಮಾದರಿಯ 370ಕ್ಕೂ ಹೆಚ್ಚು ಪೆಂಡಾಲ್‌ (ಮಂಟಪ)ಗಳನ್ನು ಹಾಕಲಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ 3,800ಕ್ಕೂ ಹೆಚ್ಚಿನ ಮೂರ್ತಿಗಳ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಲಾಗಿದೆ. ಮಂಡಳಗಳು ಸ್ಥಳೀಯರಿಂದ ಹಣ ಸಂಗ್ರಹಿಸಿ ಉತ್ಸವ ನಡೆಸುತ್ತವೆ. ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸುತ್ತವೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ಬಹುತೇಕ ಮಂಡಳಗಳು ನಿರ್ಧರಿಸಿವೆ. ಮಂಟಪಗಳನ್ನು ಕೂಡ ಸರಳವಾಗಿ ಸಿದ್ಧಪಡಿಸಲಾಗಿದೆ.

ADVERTISEMENT

ನೆರವಾಗಲು:

‘ಪ್ರವಾಹದಿಂದಾಗಿ ಸಹಸ್ರಾರು ಜನರು ಸಂಕಷ್ಟದಲ್ಲಿದ್ದಾರೆ. ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಡಾಲ್ಬಿಗಳನ್ನು (ಸೌಂಡ್ ಸಿಸ್ಟಂ) ಬಳಸುವುದಿಲ್ಲ. ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲಾಗುವುದು’ ಎಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಸಂಚಾಲಕ ವಿಕಾಸ ಕಲಘಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಟಪಗಳ ಅಲಂಕಾರಕ್ಕೆ ಹೆಚ್ಚಿನ ಹಣ ವ್ಯಯಿಸಬೇಡಿ. ಮೆರವಣಿಗೆ ಸರಳವಾಗಿರಲಿ, ಪಟಾಕಿಗಳನ್ನು ಸುಡುವುದು ಬೇಡ ಎಂದು ತಿಳಿಸಲಾಗಿದೆ. ಬಾಂದೂರ್‌ಗಲ್ಲಿ, ಪಾಟೀಲ ಗಲ್ಲಿ ಮಂಡಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹ 21ಸಾವಿರ ನೀಡಿದ್ದಾರೆ. ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹ ಉಂಟಾದಾಗ ₹ 51ಸಾವಿರ ದೇಣಿಗೆ ನೀಡಿದ್ದೆವು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಹಣ ಉಳಿಸಿ ದೇಣಿಗೆ ನೀಡಲಾಗುವುದು’ ಎಂದರು.

‘ವಿವಿಧ ಸಹಕಾರ ಸೊಸೈಟಿಗಳು ಸೇರಿ ಕಟ್ಟಿಕೊಂಡಿರುವ ‘ಶ್ರೀಗಣೇಶೋತ್ಸವ ಸಮಿತಿ’ಯಿಂದ ತಲಾ ₹ 50,001ವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ’ ಎಂದು ಅಧ್ಯಕ್ಷ ಮನೋಹರ ದೇಸಾಯಿ ಮಾಹಿತಿ ನೀಡಿದರು.

ಪ್ರವಾಹಬಾಧಿತ ಸ್ಥಳಗಳಲ್ಲಿ ಹಬ್ಬದ ಸಂಭ್ರಮ ಕಳೆಗುಂದಿದೆ. ‘ಸಂತ್ರಸ್ತರು ಹೆಚ್ಚಿರುವ ಪ್ರದೇಶಗಳಲ್ಲಿ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸುವಂತೆ ಮಂಡಳಗಳ ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ಡಾಲ್ಬಿಗಳನ್ನು ಬಳಸದಿರಲು ಸ್ವತಃ ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.