ADVERTISEMENT

ಗಂಗಾಮತಸ್ಥರ ಎಸ್‌.ಟಿ ಶಿಫಾರಸು: ಹೆಚ್ಚುವರಿ ದಾಖಲೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:11 IST
Last Updated 8 ಫೆಬ್ರುವರಿ 2021, 17:11 IST

ಬೆಂಗಳೂರು: ಗಂಗಾಮತಸ್ಥ ಮತ್ತು ಅದರ 38 ಉಪ ಜಾತಿಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸಬೇಕೆಂಬ ಶಿಫಾರಸಿಗೆ ಪೂರಕವಾಗಿ ಕೇಂದ್ರ ಸರ್ಕಾರಕ್ಕೆ ಫೆಬ್ರುವರಿ 2ರಂದು ಹೆಚ್ಚುವರಿ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌, ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಮತ್ತು ಸದಸ್ಯ ನಜೀರ್‌ ಅಹ್ಮದ್‌ ಅವರು ನಿಯಮ 68ರಲ್ಲಿ ಮಂಡಿಸಿದ್ದ ಸೂಚನೆಗೆ ಸಮಾಜ ಕಲ್ಯಾಣ ಸಚಿವರು ನೀಡಿರುವ ಉತ್ತರವನ್ನು ಸೋಮವಾರ ವಿಧಾನ ಪರಿಷತ್‌ನಲ್ಲಿ ಮಂಡಿಸಲಾಯಿತು.

ಗಂಗಾಮತಸ್ಥ ಮತ್ತು ಅದರ 38 ಉಪ ಜಾತಿಗಳನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ 2014ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಜನಗಣತಿ ಮಹಾನಿರ್ದೇಶಕರು ಎರಡು ಬಾರಿ ಪ್ರಸ್ತಾವವನ್ನು ತಿರಸ್ಕರಿಸಿದ್ದರು. 2018ರ ಅಕ್ಟೋಬರ್‌ ಮತ್ತು 2019ರ ಜುಲೈನಲ್ಲಿ ಹೆಚ್ಚುವರಿ ದಾಖಲೆ ಸಲ್ಲಿಸಲಾಗಿತ್ತು. ಫೆಬ್ರುವರಿ 2ರಂದು ಮತ್ತೆ ಹೆಚ್ಚುವರಿ ಮಾಹಿತಿ, ದಾಖಲೆಗಳನ್ನು ಕಳುಹಿಸಲಾಗಿದೆ ಎಂಬ ಮಾಹಿತಿ ಉತ್ತರದಲ್ಲಿದೆ.

ADVERTISEMENT

ಕುರುಬರ ಅಧ್ಯಯನಕ್ಕೆ 6 ತಿಂಗಳು ಬೇಕು:ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದವರಿಗೆ ಇರುವ ಮೀಸಲಾತಿಯ ಪ್ರಮಾಣವನ್ನು ಶೇಕಡ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕೆಂಬ ನಿವೃತ್ತ ನ್ಯಾಯಮೂರ್ತಿ ಡಾ.ಎಚ್‌.ಎನ್‌. ನಾಗಮೋಹನ ದಾಸ್ ಆಯೋಗದ ವರದಿಯನ್ನು ಸಂಪುಟ ಉಪ ಸಮಿತಿ ಪರಿಶೀಲಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ನೇಕಾರರಿಗೆ ಪ್ರತ್ಯೇಕ ನಿಗಮ ಇಲ್ಲ:ರಾಜ್ಯದಲ್ಲಿ ನೇಕಾರರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಪ್ರಸ್ತಾವ ಇಲ್ಲ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ವಿರೋಧ ಪಕ್ಷದ ಉಪ ನಾಯಕ ಕೆ.ಸಿ. ಕೊಂಡಯ್ಯ ಅವರ ಶೂನ್ಯ ವೇಳೆಯ ಪ್ರಸ್ತಾಪಕ್ಕೆ ಲಿಖಿತ ಉತ್ತರ ನೀಡಿರುವ ಸಚಿವರು, ‘ನೇಕಾರರ ಅಭಿವೃದ್ಧಿಗೆ ಈಗಾಗಲೇ ಎರಡು ನಿಗಮಗಳು ಹಾಗೂ ಕೈಮಗ್ಗ ಮಹಾಮಂಡಳಗಳು ಇವೆ. ಅನೇಕ ಯೋಜನೆಗಳೂ ಜಾರಿಯಲ್ಲಿವೆ. ಪ್ರತ್ಯೇಕ ನಿಗಮ ಸ್ಥಾಪಿಸುವ ಅವಶ್ಯಕತೆ ಕಂಡುಬರುವುದಿಲ್ಲ’ ಎಂದು ಹೇಳಿದ್ದಾರೆ.

ಬಲಿಷ್ಠ ಜಾತಿ ಸೇರ್ಪಡೆಗೆ ಈಡಿಗರ ವಿರೋಧ:ಪಂಚಮಸಾಲಿ ಸೇರಿದಂತೆ ಯಾವುದೇ ಬಲಿಷ್ಠ ಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಈಡಿಗ ಮತ್ತು ಅದರ 26 ಉಪ ಜಾತಿಗಳೂ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ 102 ಜಾತಿಗಳು ‘2ಎ’ ಪಟ್ಟಿಯಲ್ಲಿವೆ. ಪ್ರಬಲವಾಗಿರುವ ಯಾವುದೇ ಜಾತಿಯನ್ನು ಈ ಪಟ್ಟಿಗೆ ಸೇರಿಸಿದರೆ ಹಿಂದುಳಿದಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ‘2ಎ’ ಮೀಸಲಾತಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.