ADVERTISEMENT

ಗಾಣಿಗರ ಟ್ರಸ್ಟ್‌: ಬಾಕಿ ಅನುದಾನ ಬಿಡುಗಡೆಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 23:57 IST
Last Updated 26 ಮಾರ್ಚ್ 2025, 23:57 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್‌ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ₹3.5 ಕೋಟಿ ಅನುದಾನದಲ್ಲಿನ ಬಾಕಿ ₹1.5 ಕೋಟಿ ಮೊತ್ತವನ್ನು ತಿಂಗಳೊಳಗೆ ಬಿಡುಗಡೆಗೆ ಮಾಡಬೇಕು. ಇಲ್ಲವಾದಲ್ಲಿ, ಬಿಡುಗಡೆಗೆ ಬಾಕಿ ಇರುವ ದಿನದಿಂದ ಬಿಡುಗಡೆ ಮಾಡುವ ದಿನದವರೆಗೆ ಶೇ 6ರಷ್ಟು ಬಡ್ಡಿ  ಪಾವತಿ ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಸಂಬಂಧ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ವ್ಯವಸ್ಥಾಪಕ ಟ್ರಸ್ಟಿಯೂ ಆದ ಪೂರ್ಣಾನಂದಪುರಿ ಸ್ವಾಮೀಜಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ವಿ.ಬಿ.ಸಿದ್ದರಾಮಯ್ಯ ಅವರ ವಾದ ಆಲಿಸಿದ ನ್ಯಾಯಪೀಠ, ‘ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಹಣಕಾಸು ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸೂಚನೆ ನೀಡಿದ್ದರೂ ಇನ್ನೂ ಬಿಡುಗಡೆ ಮಾಡದಿರುವುದು ಆಘಾತಕಾರಿ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದೆ.

ADVERTISEMENT

====

ಕಾಂಗ್ರೆಸ್‌ ಕಚೇರಿಗೆ ಪಾಲಿಕೆ ಜಾಗ: ಸರ್ಕಾರಕ್ಕೆ ನೋಟಿಸ್‌

ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಸೇರಿದ ಜಾಗವನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಬೀರಪ್ಪ ಹಾಗೂ ಸಂತೋಷ್ ಎಸ್.ಚವಾಣ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ‘ಮಂಜೂರು ಮಾಡಲಾಗಿರುವ ಜಾಗವು ರೈಲ್ವೆ ಇಲಾಖೆಗೆ ಸೇರಿದ್ದು ಇದನ್ನು ಬಹಳ ವರ್ಷಗಳ ಹಿಂದೆಯೇ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಸದ್ಯ ಈ ಜಾಗವನ್ನು ಕುಡಿಯುವ ನೀರು ಸಂಗ್ರಹಿಸಲು ಮೀಸಲಿಡಲಾಗಿದೆ. ಈ ಜಮೀನನ್ನು ಮಂಜೂರು ಮಾಡಿರುವುದು, ಕರ್ನಾಟಕ ನಗರಸಭೆ ಮತ್ತು ಪಾಲಿಕೆ ಕಾಯ್ದೆ–1976ರ ಕಲಂ 176ಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.

ನೈರುತ್ಯ ರೈಲ್ವೆ ಪರ ಸಹಾಯಕ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ‘ಜಾಗದ ವಸ್ತುಸ್ಥಿತಿ ಕುರಿತಂತೆ ಮಾಹಿತಿ ಪಡೆದುಕೊಳ್ಳಲು ಕಾಲಾವಕಾಶ ಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅಂತೆಯೇ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಮುಂದಿನ ವಿಚಾರಣೆವರೆಗೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ’ ಎಂದು ಭರವಸೆ ನೀಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನಗರಾಭಿವೃದ್ದಿ ಇಲಾಖೆ, ನೈರುತ್ಯ ರೈಲ್ವೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಧಾರವಾಡ ಜಿಲ್ಲಾ ಘಟಕಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು. 

=====

ಸಹಕಾರ ಸಂಘ: ಕಾಮನ್‌ ಪೋರ್ಟಲ್ ರೂಪಿಸಿ

‘ರಾಜ್ಯ ಸಹಕಾರ ಕಾಯ್ದೆ ಮತ್ತು ಅದರ ಅಡಿಯಲ್ಲಿ ರಚನೆಯಾಗಿರುವ ಸಂಘಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕಾಮನ್‌ ಪೋರ್ಟಲ್‌ ರೂಪಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ನಾಗರಭಾವಿಯ ಎಂ.ಆರ್‌.ರುಕ್ಮಾಂಗದ ಸೇರಿದಂತೆ 13 ಜನರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅದೇಶ ಪಾಲನೆ ಕುರಿತಂತೆ ನಾಲ್ಕು ವಾರಗಳಲ್ಲಿ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಬೇಕು’ ಎಂದು ರಾಜ್ಯ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಾಕೀತು ಮಾಡಿದೆ.

‘ಸಹಕಾರ ಸಂಘಗಳು, ಸಹಕಾರ ಕಾಯ್ದೆ ಮತ್ತು ಅದರ ಅಡಿಯಲ್ಲಿ ರಚಿಸಿರುವ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್‌ ಆಫ್‌ ಕೋ ಆಪರೇಟಿವ್ಸ್‌ ಮತ್ತು ಇ-ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಒಂದುಗೂಡಿ ಕಾಮನ್‌ ಪೋರ್ಟ್‌ಲ್‌ ರೂಪಿಸಲು ಇದು ಸಕಾಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಈ ಪೋರ್ಟಲ್‌ನಲ್ಲಿ ಎಲ್ಲ ಸಹಕಾರಿ ಸಂಘಗಳ ದತ್ತಾಂಶವನ್ನು ಅಪ್‌ಲೋಡ್‌ ಮಾಡಬೇಕು. ಸಹಕಾರ ಸಂಘಗಳು ಕಾಯ್ದೆ ಮತ್ತು ನಿಯಮಗಳಡಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಇದು ಒಳಗೊಂಡಿರಬೇಕು. ಪೋರ್ಟ್‌ಲ್‌ ಪ್ರವೇಶಿಸುವ ಅವಕಾಶ ಮತ್ತು ಅಧಿಕಾರ ರಿಜಿಸ್ಟ್ರಾರ್‌ ಆಫ್‌ ಕೋ ಆಪರೇಟಿವ್‌ ಅವರಿಗೆ ಮಾತ್ರವೇ ಇರಬೇಕು. ಅವರು ಎಲ್ಲಾ ಸಂಘಗಳ ಮೇಲೆ ನಿಗಾ ಇಡಲು ಇದು ಸಹಕಾರಿಯಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.

ವಿಜಯನಗರದ ವಿಶ್ವಪ್ರಜ್ಞ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿಮಿಟೆಡ್‌ ಅರ್ಜಿದಾರರನ್ನು ಅನರ್ಹ ಮತದಾರರೆಂದು ಪ್ರಕಟಿಸಿತ್ತು. ಸಂಘದ ಈ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದ್ದು, ‘ಅರ್ಜಿದಾರರು ಈಗಾಗಲೇ ಮತದಾನ ಮಾಡಿರುವ ಕಾರಣ ಪ್ರತಿವಾದಿಗಳು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕು’ ಎಂದು ಆದೇಶಿಸಿದೆ.

====

‘ಎಎಬಿ ನಿರ್ಣಯ ಅಪರಿಪೂರ್ಣ’

‘ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮ ಅವರ ಮನೆಯಲ್ಲಿ ಕೋಟ್ಯಂತರ ಮೊತ್ತದ ನಗದು ದೊರೆತಿತ್ತು ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಬೆಂಗಳೂರು ವಕೀಲರ ಸಂಘದ (ಎಎಬಿ) ಸರ್ವಸದಸ್ಯರ ವಿಶೇಷ ತುರ್ತು ಸಭೆಯ ನಿರ್ಣಯಗಳು ಪರಿಪೂರ್ಣವಾಗಿಲ್ಲ’ ಎಂದು ಭಾರತೀಯ ವಕೀಲರ ಪರಿಷತ್‌ನ ಸಹ ಅಧ್ಯಕ್ಷ ಸದಾಶಿವ ರೆಡ್ಡಿ ಮತ್ತು ಎಎಬಿ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌ ಸೇರಿದಂತೆ ಹಲವು ಹಿರಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಹಲವು ವಕೀಲರು ಹಾಗೂ ಸಂಘದ ಪದಾಧಿಕಾರಿಗಳು ಸಹಿ ಮಾಡಿ ಬುಧವಾರ ಬಿಡುಗಡೆ ಮಾಡಿರುವ ನಾಲ್ಕು ಪುಟಗಳ ಹೇಳಿಕೆಯಲ್ಲಿ; ‘ಠರಾವಿನ ಅನುಸಾರ ಸಭೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯ ಮತ್ತು ಒಮ್ಮತದ ನಿರ್ಧಾರಗಳನ್ನು 2025ರ ಮಾರ್ಚ್‌ 24ರಂದು ಹೊರಡಿಸಲಾಗಿರುವ ನಿರ್ಣಯದಲ್ಲಿ ಕಾಣಿಸಿಲ್ಲ. ಹಾಲಿ ಅಧ್ಯಕ್ಷರು ಕೂಡಲೇ ಬಿಡುಗಡೆ ಮಾಡಿರುವ ಈ ನಿರ್ಣಯಗಳನ್ನು ವಾಪಸು ಪಡೆದು ಪುನರ್ ದಾಖಲಿಸಬೇಕು’ ಎಂದು ಒತ್ತಾಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.