ADVERTISEMENT

ಪರಮೇಶ್ವರ ಅವರು ರನ್ಯಾ ರಾವ್‌ಗೆ ₹ 25 ಲಕ್ಷ ಕೊಟ್ಟಿರಬಹುದು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಮೇ 2025, 21:05 IST
Last Updated 22 ಮೇ 2025, 21:05 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

ಬೆಂಗಳೂರು: ‘ರನ್ಯಾ ರಾವ್‌ಗೆ ಮದುವೆ ಉಡುಗೊರೆಯಾಗಿ ಪರಮೇಶ್ವರ ಅವರು ₹25 ಲಕ್ಷ – ₹15 ಲಕ್ಷ ಕೊಟ್ಟಿರಬಹುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ADVERTISEMENT

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗೃಹ ಸಚಿವ ಪರಮೇಶ್ವರ ಅವರು ಮುಖ್ಯಸ್ಥರಾಗಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ರಾಜ್ಯದ ಜವಾಬ್ದಾರಿಯುತ ಗೃಹ ಸಚಿವರು. ರನ್ಯಾ ಅವರಿಗೆ ಹಣ ನೀಡಿದ ಮಾತ್ರಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಹೇಳುತ್ತಾರೆಯೇ? ಆ ರೀತಿ ಯಾವ ರಾಜಕಾರಣಿಯೂ ಹೇಳಿರಲು ಸಾಧ್ಯವಿಲ್ಲ’ ಎಂದರು.

‘ಸಾರ್ವಜನಿಕ ಜೀವನದಲ್ಲಿರುವ ಬಹಳಷ್ಟು ಜನರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆ ಕೊಟ್ಟಿರಬಹುದು. ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಆಕೆಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಅದಕ್ಕೆ ಅಭ್ಯಂತರವಿಲ್ಲ. ಆದರೆ, ಪರಮೇಶ್ವರ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ. ಅವರ ಬಗ್ಗೆ ಹೆಮ್ಮೆಯಿದೆ. 1990ರಿಂದಲೂ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಯಾವುದೇ ತಪ್ಪು ಮಾಡಿಲ್ಲ. ಇ.ಡಿಗೂ ಶೋಧನೆಗೂ, ರನ್ಯಾ ರಾವ್‌ ಪ್ರಕರಣಕ್ಕೂ ಸಂಬಂಧ ಇಲ್ಲ’ ಎಂದು ಹೇಳಿದರು.

ಶಿವಕುಮಾರ್‌ ಅವರನ್ನೇ ಕೇಳಿ: ಪರಮೇಶ್ವರ
‘ರನ್ಯಾ ರಾವ್‌ಗೆ ಉಡುಗೊರೆಯಾಗಿ ಹಣ ಕೊಟ್ಟಿರಬಹುದು’ ಎಂಬ ಶಿವಕುಮಾರ್‌ ಅವರ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪರಮೇಶ್ವರ ಈ ಕುರಿತು ಮಾಹಿತಿ ಇಲ್ಲ. ಅವರನ್ನೇ ಕೇಳಿ ಎಂದು ಹೇಳಿದರು. ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣದ ಕಾರಣಕ್ಕಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಇ.ಡಿ. ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎಂದು ಯಾರು ಹೇಳಿದ್ದಾರೆ’ ಎಂದು ಪ್ರಶ್ನಿಸಿದರು. ‘ಯಾರೋ ಹೇಳಿದ ತಕ್ಷಣ ಉತ್ತರ ಕೊಡಲು ಸಾಧ್ಯವಿಲ್ಲ. ಮೊದಲು ತನಿಖೆ ನಡೆದು, ವರದಿ ಬರಲಿ ನೋಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.