ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ಅವಕಾಶಗಳ ಕುರಿತ ಸಂವಾದದಲ್ಲಿ ಇಂಕ್‌ಟಾಕ್ಸ್ ಸಿಇಒ ಲಕ್ಷ್ಮೀ ಪ್ರತೂರಿ, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಎ.ಅತೀಕ್, ನೆಕ್ಸ್ಟ್‌ವೆಲ್ತ್ ಸಿಇಒ ಮೈಥಿಲಿ ರಮೇಶ್ ಮತ್ತು ಕಿರಾಣಾ ಪ್ರೊ ಸಂಸ್ಥಾಪಕ ದೀಪಕ್ ರವೀಂದ್ರನ್ ಚರ್ಚಿಸಿದರು
–ಪ್ರಜಾವಾಣಿ ಚಿತ್ರ/ರಂಜು ಪಿ
ಬೆಂಗಳೂರು: ‘ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಸಮರ್ಥ ಮಾನವ ಸಂಪನ್ಮೂಲ, ಮೂಲಸೌಕರ್ಯ ಸಿಗುವುದೇ ಇಲ್ಲ ಎಂದು ಬಹುತೇಕ ಉದ್ಯಮಿಗಳು ಗೊಣಗುತ್ತಾರೆ. ಆದರೆ ಅದು ಮಿಥ್ಯೆ’ ಎಂದು ನೆಕ್ಸ್ಟ್‌ವೆಲ್ತ್ ಎಂಟರ್‌ಪ್ರೆನರ್ಸ್ ಲಿಮಿಟೆಡ್‌ನ ಸಿಇಒ ಮೈಥಿಲಿ ರಮೇಶ್ ಅಭಿಪ್ರಾಯಪಟ್ಟರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಎರಡನೇ ದಿನವಾದ ಬುಧವಾರ ಆಯೋಜಿಸಲಾಗಿದ್ದ ‘ಭಾರತದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿನ ಅವಕಾಶಗಳು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೆಟ್ರೊ ನಗರಗಳಾಚೆಗೂ ಉದ್ಯಮಗಳನ್ನು ಸ್ಥಾಪನೆ ಮಾಡಿದರೆ, ಅಲ್ಲಿನ ಅವಕಾಶಗಳು ತೆರೆದುಕೊಳ್ಳುತ್ತವೆ’ ಎಂದರು.
ಕಿರಾಣಾ ಪ್ರೊ ಸಂಸ್ಥಾಪಕ ದೀಪಕ್ ರವೀಂದ್ರನ್, ‘ಬೆಂಗಳೂರು, ಕೊಚ್ಚಿಗಳಂತಹ ಮೆಟ್ರೊ ನಗರಗಳಲ್ಲಿ ನವೋದ್ಯಮಗಳ ಬಂಡವಾಳ ಕ್ರೋಡೀಕರಣಕ್ಕೆ ವಿಪರೀತ ಪೈಪೋಟಿ ಇದೆ. ಆದರೆ ಸಣ್ಣ ನಗರಗಳಲ್ಲಿ ಅಂತಹ ಪೈಪೋಟಿ ಕಡಿಮೆ ಮತ್ತು ಜನರನ್ನು ತಲುಪುವುದು ಸುಲಭ. ನವೋದ್ಯಮಗಳು ಮತ್ತು ಹೊಸ ಸ್ವರೂಪದ ಯೋಜನೆಗಳ ಪ್ರಗತಿ ನಿಧಾನಗತಿಯಲ್ಲಿದ್ದರೂ, ಯಶಸ್ಸಿನ ಸಾಧ್ಯತೆ ಹೆಚ್ಚು’ ಎಂದರು.
ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ‘ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಸಮರ್ಥ ಮಾನವ ಸಂಪನ್ಮೂಲ, ಉತ್ತಮ ಮೂಲಸೌಕರ್ಯ ಲಭ್ಯವಿದೆ. ಬೆಂಗಳೂರಿನಾಚೆಗೂ ಉದ್ಯಮಗಳನ್ನು ವಿಸ್ತರಿಸದೇ ಹೋದರೆ, ಆ ಸಂಪನ್ಮೂಲ ವ್ಯರ್ಥವಾಗುತ್ತದೆ. ಹೀಗಾಗಿಯೇ ಅಂತಹ ನಗರಗಳಲ್ಲಿ ಉದ್ಯಮಗಳ ಸ್ಥಾಪನೆಗೆ ರಾಜ್ಯ ಸರ್ಕಾರವು ಹೆಚ್ಚು ಉತ್ತೇಜನ ನೀಡುತ್ತಿದೆ’ ಎಂದರು.
ಬೆಂಗಳೂರಿನಾಚೆಗಿನ ಸಣ್ಣ ನಗರಗಳಲ್ಲಿ ಕೈಗಾರಿಕೆ ಆಧಾರಿತ ಕೌಶಲಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ರೂಪಿಸಿದೆಎಲ್.ಕೆ.ಅತೀಕ್ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
‘ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಬಲ ಸ್ಥಾನ ಹೊಂದಿರುವ ಕಂಪನಿ ಮತ್ತು ಅದರ ಉತ್ಪನ್ನಗಳಿಗೆ ಪ್ರಬಲ ಪೈಪೋಟಿ ನೀಡುವುದಾದರೆ ನಮ್ಮ ಯೋಚನೆ ಮತ್ತು ಉತ್ಪನ್ನ ಎರಡೂ ನಾವೀನ್ಯದಿಂದ ಕೂಡಿರಬೇಕು’ ಎಂದು ನಥಿಂಗ್ ಸ್ಮಾರ್ಟ್‌ಫೋನ್ ಕಂಪನಿಯ ಸಹ ಸಂಸ್ಥಾಪಕ ಆಕಿಸ್ ಇವಾನ್‌ಗೆಲ್ಡಿಸ್ ಅಭಿಪ್ರಾಯಪಟ್ಟರು.
ನಾವೀನ್ಯ ಕುರಿತ ಸಂವಾದ ನಡೆಸಿಕೊಟ್ಟ ಪತ್ರಕರ್ತ ಶಿವ್ ಅರೋರ ‘ನಥಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಆ್ಯಪಲ್ ಫೋನ್‌ಗಳಿಗೆ ಪರ್ಯಾಯ ಎಂಬಂತೆ ಕೆಲವರು ಬಿಂಬಿಸುತ್ತಾರೆ. ಅಂತಹ ಒತ್ತಡವನ್ನು ನಿಮ್ಮ ಕಂಪನಿ ಎದುರಿಸಿದ ಬಗೆ ಹೇಗೆ’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆಕಿಸ್ ‘ಯಾವುದೇ ಉತ್ಪನ್ನಕ್ಕೆ ನಮ್ಮ ಉತ್ಪನ್ನ ಪರ್ಯಾಯ ಎಂದು ಬಿಂಬಿಸಿದರೆ ಅದರ ಮಾರುಕಟ್ಟೆ ಸೀಮಿತವಾಗುತ್ತದೆ. ಬದಲಿಗೆ ನಮ್ಮ ಉತ್ಪನ್ನ ವಿಶಿಷ್ಟವಾದುದು. ಅದು ಯಾವುದಕ್ಕೂ ಪರ್ಯಾಯವಲ್ಲ ಅದಕ್ಕೆ ಪರ್ಯಾಯವೂ ಇಲ್ಲ ಎಂಬಂತೆ ಅದನ್ನು ಅಭಿವೃದ್ಧಿ ಮಾಡಿರಬೇಕು’ ಎಂದರು.
‘ನಮ್ಮ ನಾವೀನ್ಯ ಯೋಚನೆಗಳು ಯಥಾವತ್ತಾಗಿ ಉತ್ಪನ್ನವಾಗಿ ಮೂಡಿಬರಬೇಕು. ಆಗ ಮಾತ್ರ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.