ADVERTISEMENT

ಬಾಲಕಿಗೆ ವಿರಳ ಅನುವಂಶೀಯ ಕಾಯಿಲೆ: ಚಿಕಿತ್ಸೆಗಾಗಿ ಸಚಿವ ಜಮೀರ್ ದೇಣಿಗೆ ಸಂಗ್ರಹ

ವಿರಳ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ಬಾಲಕಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 15:48 IST
Last Updated 29 ಏಪ್ರಿಲ್ 2025, 15:48 IST
ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಇಂಡಿಯಾ ಬಿಲ್ಡರ್ಸ್ ಮಾಲೀಕ ಜಿಯಾವುಲ್ಲಾ ಷರೀಫ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಇಂಡಿಯಾ ಬಿಲ್ಡರ್ಸ್ ಮಾಲೀಕ ಜಿಯಾವುಲ್ಲಾ ಷರೀಫ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು   

ಬೆಂಗಳೂರು: ವಿರಳ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ ಕೀರ್ತನಾಳ ಚಿಕಿತ್ಸೆಗೆ ಅಗತ್ಯವಿರುವ ₹16 ಕೋಟಿಯನ್ನು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿ ಸಂಗ್ರಹಿಸಲು ವಸತಿ ಸಚಿವ ಬಿ.ಝಡ್‌.ಜಮೀರ್ ಅಹಮದ್ ಖಾನ್‌ ಮುಂದಾಗಿದ್ದಾರೆ.

ಮೈಸೂರಿನ ನಾಗಶ್ರೀ ಮತ್ತು ಕಿಶೋರ್ ದಂಪತಿಯು ಈಚೆಗೆ ಸಚಿವರನ್ನು ಭೇಟಿ ಮಾಡಿ, ತಮ್ಮ ಮಗಳಿಗೆ ಇರುವ ಕಾಯಿಲೆ ಹಾಗೂ ಅದಕ್ಕೆ ಅಗತ್ಯವಿರುವ ಚಿಕಿತ್ಸೆಯ ವೆಚ್ಚದ ಬಗ್ಗೆ ವಿವರಿಸಿದ್ದರು. ಅದಕ್ಕೆ ಸ್ಪಂದಿಸಿದ್ದ ಜಮೀರ್‌ ಅವರು ₹25 ಲಕ್ಷದ ಚೆಕ್‌ ಅನ್ನು ಬಾಲಕಿಗೆ ಹಸ್ತಾಂತರಿಸಿದ್ದರು. ಚಿಕಿತ್ಸೆಗೆ ಅಗತ್ಯವಿರುವ ಉಳಿದ ಮೊತ್ತ ಸಂಗ್ರಹಕ್ಕಾಗಿ ಕಾರ್ಪೊರೇಟ್‌ ಉದ್ಯಮಿಗಳನ್ನು ತಾವೇ ಸ್ವತಃ ಭೇಟಿ ಮಾಡಿ, ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಇಂಡಿಯಾ ಬಿಲ್ಡರ್ಸ್‌ನ ಮಾಲೀಕ ಜಿಯಾವುಲ್ಲಾ ಷರೀಫ್‌ ಅವರನ್ನು ಮಂಗಳವಾರ ಭೇಟಿ ಮಾಡಿದ ಜಮೀರ್ ಅವರು, ‘ಮಗುವಿನ ಚಿಕಿತ್ಸೆಗೆ ವಾರ್ಷಿಕ ₹50 ಲಕ್ಷ ವೆಚ್ಚವಾಗುತ್ತದೆ. ಚಿಕಿತ್ಸೆಯಲ್ಲಿ ಬಳಸುವ ಔಷಧ ಭಾರತದಲ್ಲಿ ತಯಾರಾಗುವುದಿಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳಬೇಕಿರುವ ಔಷಧಿಯು ದುಬಾರಿ ಮೊತ್ತದ್ದಾಗಿದೆ. ಬಾಲಕಿಯ ಚಿಕಿತ್ಸೆಗೆ ನೆರವಾಗಿ’ ಎಂದು ಜಿಯಾವುಲ್ಲಾ ಅವರಿಗೆ ಲಿಖಿತ ಮನವಿ ನೀಡಿದ್ದಾರೆ.

ADVERTISEMENT

‘ಮನವಿಗೆ ಸ್ಪಂದಿಸಿರುವ ಜಿಯಾವುಲ್ಲಾ ಅವರು, ಅಗತ್ಯ ನೆರವನ್ನು ಒದಗಿಸುವುದಾಗಿ ತಿಳಿಸಿದ್ದಾರೆ’ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.