ಸಾಂದರ್ಭಿಕ ಚಿತ್ರ
ಬೆಂಗಳೂರು: ವಿದ್ಯಾರ್ಥಿಗಳ ಕೊರತೆ ಇರುವ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸಿರುವ ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ರಾಜ್ಯದಲ್ಲಿ 821 ಅನುದಾನಿತ ಪದವಿಪೂರ್ವ ಕಾಲೇಜುಗಳಿವೆ. ಸರ್ಕಾರದ ನಿಯಮದಂತೆ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆಯಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 40 ಇರಬೇಕು. ಬಹುತೇಕ ಕಾಲೇಜುಗಳಲ್ಲಿ ಪ್ರತಿವರ್ಷವೂ ವಿದ್ಯಾರ್ಥಿಗಳ ಪ್ರವೇಶದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಅಂತಹ ಕಾಲೇಜುಗಳಲ್ಲಿ ಅನುದಾನಿತ ವೇತನ ಪಡೆಯುತ್ತಿರುವ ಉಪನ್ಯಾಸಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಅನುದಾನಿತ ಕಾಲೇಜುಗಳಲ್ಲಿ 4,291 ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಇತ್ತೀಚೆಗಷ್ಟೇ ಅನುಮೋದನೆ ನೀಡಿತ್ತು. 1995–96ನೇ ಶೈಕ್ಷಣಿಕ ಸಾಲಿನ ಪೂರ್ವದಲ್ಲಿ ಆರಂಭವಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಶಾಲಾ–ಕಾಲೇಜುಗಳಲ್ಲಿ ಜನವರಿ 2016ರಿಂದ ಡಿಸೆಂಬರ್ 2020ರವರೆಗಿನ ಅವಧಿಯಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿ ಇರುವ ಎಲ್ಲ ವಿಷಯಗಳ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂದು ಸೂಚಿಸಿತ್ತು.
ಅನುಮೋದನೆ ದೊರೆತ ನಂತರ ಕಾಲೇಜುಗಳ ಆಡಳಿತ ಮಂಡಳಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಬೆನ್ನಲ್ಲೇ ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳ ವಿಷಯವಾರು ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆದೇಶ ಹೊರಡಿಸಿದೆ.
ಸರ್ಕಾರಿ ಕಾಲೇಜು ನಿಯೋಜನೆಗೂ ತಡೆ: ಅನುದಾನಿತ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶೇ 50ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ದಶಕಗಳ ಹಿಂದೆ ಆರಂಭವಾಗಿದ್ದ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ವಿವಿಧ ಕೋರ್ಸ್ ಇದ್ದವು. ಈಗ ಗ್ರಾಮೀಣ ಪ್ರದೇಶದಲ್ಲಿ ಕಲಾ, ವಾಣಿಜ್ಯ ವಿಷಯಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಈ ಕುರಿತು 2018ರಲ್ಲಿ ನಿಯಮ ರೂಪಿಸಿದ್ದ ಸರ್ಕಾರ, ವಿದ್ಯಾರ್ಥಿಗಳ ಕೊರತೆ ಎದುರಾದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಸಮೀಪದ ಸರ್ಕಾರಿ ಕಾಲೇಜುಗಳಿಗೆ ನಿಯೋಜನೆ ಮಾಡಲು ಸಮ್ಮತಿಸಿತ್ತು. ಈ ನಿಯಮಕ್ಕೆ 2022ರಲ್ಲಿ ತಿದ್ದುಪಡಿ ತಂದು ಸರ್ಕಾರಿ ಕಾಲೇಜುಗಳಿಗೆ ನಿಯೋಜನೆ ಮಾಡುವುದಕ್ಕೆ ನಿರ್ಬಂಧ ವಿಧಿಸಿತು.
‘ಹಲವು ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆ ಇದೆ. ಕೊರತೆ ಇರುವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡಬೇಕು. 2022ರ ನಿಯಮಕ್ಕೆ ತಿದ್ದುಪಡಿ ತಂದು 2018ರಲ್ಲಿ ಇದ್ದಂತೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೇವೆ. ಈಗ ಕೆಲವರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿರುವುದು ಸೇವಾ ಭದ್ರತೆಯನ್ನೇ ಕಿತ್ತುಕೊಂಡಂತೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಅಧ್ಯಕ್ಷ ಎ.ಎಚ್. ನಿಂಗೇಗೌಡ.
ಕಾರ್ಯಭಾರಕ್ಕಾಗಿ ವಿಷಯವಾರು 40 ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ. ರಾಜ್ಯದಲ್ಲಿನ 1,232 ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಷಯವಾರು ವಿದ್ಯಾರ್ಥಿಗಳ ಸಂಖ್ಯೆ 30ಕ್ಕಿಂತ ಕಡಿಮೆ ಇದೆ.
821 ಅನುದಾನಿತ ಕಾಲೇಜುಗಳಲ್ಲಿ 426ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 425ಕ್ಕಿಂತ ಕಡಿಮೆ ಇದೆ. ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳ 379 ಉಪನ್ಯಾಸಕರ ವೇತನವನ್ನು ಕಳೆದ 6 ತಿಂಗಳಿನಿಂದ ತಡೆ ಹಿಡಿಯಲಾಗಿದೆ.
ಒಂದು ದಶಕ ವೇತನ ರಹಿತ ಸೇವೆಯ ನಂತರ ಕೆಲಸ ಕಾಯಂ ಆಗಿತ್ತು. ಕಾರ್ಯಭಾರದ ಕೊರತೆಯ ಕಾರಣ 2018ರಿಂದ ಸರ್ಕಾರಿ ಕಾಲೇಜಿಗೆ ನಿಯೋಜನೆಗೊಂಡಿದ್ದೆ. ಈಗ ಕೆಲಸದಿಂದಲೇ ಬಿಡುಗಡೆ ಮಾಡಿದ್ದಾರೆ. ಬದುಕು ಬೀದಿಗೆ ಬಿದ್ದಿದೆ.-ಕೆ.ಕೆ. ಗೌಡ, ಬೆಂಗಳೂರು
ಕಾರ್ಯಭಾರ ಕಡಿಮೆ ಇರುವ ಅನುದಾನಿತ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಹೊರಡಿಸಿದ ಆದೇಶ ಹಿಂಪಡೆಯಬೇಕು. ಸೇವಾ ಭದ್ರತೆ ಒದಗಿಸಬೇಕು.-ಎ.ಎಚ್. ನಿಂಗೇಗೌಡ, ಅಧ್ಯಕ್ಷ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.