ADVERTISEMENT

ಬೆಲೆ ಏರಿಕೆ | ಆಹಾರ ಪ್ರಮಾಣದಲ್ಲಿ ಕಡಿತ: ಅಂಗನವಾಡಿ ಕೇಂದ್ರಗಳಲ್ಲಿ ಸಮಸ್ಯೆ

ಬಸವರಾಜ ಹವಾಲ್ದಾರ
Published 2 ಜನವರಿ 2025, 23:30 IST
Last Updated 2 ಜನವರಿ 2025, 23:30 IST
<div class="paragraphs"><p>ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ವಿತರಣೆ ಸಂದರ್ಭದಲ್ಲಿದ್ದ ಫಲಾನುಭವಿಗಳು</p></div>

ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ವಿತರಣೆ ಸಂದರ್ಭದಲ್ಲಿದ್ದ ಫಲಾನುಭವಿಗಳು

   

ಬಾಗಲಕೋಟೆ: ದಿನಸಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಆದರೆ, ಏಳು ವರ್ಷಗಳಿಂದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ದರದಲ್ಲಿ ಬದಲಾವಣೆ ಆಗಿಲ್ಲ. ಪರಿಣಾಮ ಹಾಲಿನ ಪುಡಿ, ಅಡುಗೆ ಎಣ್ಣೆ ಸೇರಿ ವಿವಿಧ ವಸ್ತುಗಳ ಪ್ರಮಾಣ ಕಡಿತ ಮಾಡಲಾಗಿದೆ.

ರಾಜ್ಯದಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ 19.83 ಲಕ್ಷ ಮಕ್ಕಳಿದ್ದರೆ, 3 ವರ್ಷದಿಂದ 6 ವರ್ಷದೊಳಗಿನ 17.82 ಲಕ್ಷ ವಿದ್ಯಾರ್ಥಿಗಳಿದ್ದಾರೆ. 3 ವರ್ಷದೊಳಗಿನ ಮಕ್ಕಳ ಮನೆಗೆ ಆಹಾರ ಧಾನ್ಯ ನೀಡಿದರೆ, 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲೇ ಆಹಾರ ಸಿದ್ಧಪಡಿಸಿ, ನೀಡಲಾಗುತ್ತದೆ.

ADVERTISEMENT

ಅಪೌಷ್ಟಿಕ ಮಕ್ಕಳ ಆಹಾರಕ್ಕೆ ₹8, ತೀವ್ರ ಅಪೌಷ್ಟಿಕ ಮಕ್ಕಳಿಗೆ ₹12, ಗರ್ಭಿಣಿ ಮತ್ತು ಬಾಣಂತಿಯರಿಗೆ ₹21 ನಿಗದಿ ಮಾಡಲಾಗಿದೆ. ಸಾಮಾನ್ಯ, ಅಪೌಷ್ಟಿಕ, ತೀವ್ರ ಅಪೌಷ್ಟಿಕ ಮಕ್ಕಳೆಂದು ವಿಂಗಡಿಸಲಾಗಿದ್ದು, ಅದರ ಆಧಾರದ ಮೇಲೆ ಆಹಾರ ಧಾನ್ಯದ ಪ್ರಮಾಣ ನೀಡಲಾಗುತ್ತದೆ.

ಹಾಲಿನ ಪುಡಿಯ ಬೆಲೆ ಹೆಚ್ಚಳ ಆಗಿರುವುದರಿಂದ ಮೊದಲು ನೀಡುತ್ತಿದ್ದ 20 ಗ್ರಾಂ ಹಾಲಿನ ಪುಡಿಯನ್ನು 15 ಗ್ರಾಂ ಪ್ರಮಾಣಕ್ಕೆ ಇಳಿಸಲಾಗಿದೆ. ಅಡುಗೆ ಎಣ್ಣೆ ಪ್ರಮಾಣವನ್ನು 5 ಗ್ರಾಂ ನಿಂದ 3.3 ಗ್ರಾಂ ಗೆ ಕಡಿಮೆ ಮಾಡಲಾಗಿದೆ. ಈ ಮೊದಲು ಮಿಕ್ಸ್ ಮಸಾಲೆ ಕೊಡಲಾಗುತಿತ್ತು. ಅದರ ಬದಲು ಈಗ ಮೆಣಸಿಕಾಯಿ ಪುಡಿ ನೀಡಲಾಗುತ್ತಿದೆ.

ಸಾಂಬಾರು ತಯಾರಿಸಲು ತೊಗರಿಬೇಳೆ ನೀಡಲಾಗುತಿತ್ತು. ಬೆಲೆ ಹೆಚ್ಚಾಗಿರುವ ಕಾರಣ ಅದರ ಬದಲು ಹೆಸರುಕಾಳು ಕೊಡಲಾಗುತ್ತಿದೆ. ಈಗ ಅದರ ಸಾಂಬಾರನ್ನೇ ಸಿದ್ಧಪಡಿಸಲಾಗುತ್ತದೆ. ಪ್ರತಿ ಮಗುವಿಗೆ 30.55 ಗ್ರಾಂ ತೊಗರಿಬೇಳೆ ನೀಡಲಾಗುತಿತ್ತು. ಈಗ 18.5 ಗ್ರಾಂ ಹೆಸರುಕಾಳು ನೀಡಲಾಗುತ್ತಿದೆ.

‘ಆಹಾರ ನೀಡುವ ಪ್ರಮಾಣವನ್ನು ಆಗಾಗ ಬದಲಾಯಿಸುತ್ತ ಇರುತ್ತಾರೆ. ಯಾವ ವಸ್ತುವಿನ ಬೆಲೆ ಹೆಚ್ಚಾಗುತ್ತದೆಯೋ ಅದನ್ನು ಕಡಿತಗೊಳಿಸಿ, ಕಡಿಮೆ ಬೆಲೆ ಇರುವುದನ್ನು ಹೆಚ್ಚಿಗೆ ನೀಡುವಂತೆ ತಿಳಿಸುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ಎರಡು ತಿಂಗಳಿಂದ ಬಂದಿಲ್ಲ ಹಾಲಿನ ಪುಡಿ, ಸಕ್ಕರೆ: ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಹಾಲಿನ ಪುಡಿ, ಸಕ್ಕರೆ ಬಂದಿಲ್ಲ. 6 ರಿಂದ 3 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸಿಲ್ಲ. ಹಾಲಿನ ಪುಡಿ ಮತ್ತು ಸಕ್ಕರೆ ಲಭ್ಯವಿದ್ದರೆ ಮಾತ್ರ ಅಂಗನವಾಡಿ ಕೇಂದ್ರಗಳಲ್ಲಿ ಅವುಗಳನ್ನು ಮಕ್ಕಳಿಗೆ ನೀಡಲಾಗುತ್ತದ. ಇಲ್ಲದಿದ್ದರೆ, ಇಲ್ಲ.

‘ಸರಿಯಾಗಿ ಆಹಾರ ಪೂರೈಕೆಯಾಗದ ಕಾರಣ ಜನ ನಮ್ಮನ್ನು ಬಯ್ಯುತ್ತಾರೆ. ಮೊದಲು ಸರಿಯಾಗಿ ನೀಡುತ್ತಿದ್ದೀರಿ. ಈಗ ನೀಡುತ್ತಿಲ್ಲ. ಎರಡು ತಿಂಗಳಿನಿಂದ ಅಗತ್ಯವಾದದ್ದು ಪೂರೈಕೆ ಆಗದಿದ್ದರೆ, ಮಕ್ಕಳ ಪೋಷಕರಿಗೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಏನೆಂದು ಉತ್ತರಿಸಬೇಕು’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ಲ್ಲೆಯ ಕೆಲ ತಾಲ್ಲೂಕುಗಳಿಗೆ ಹಾಲಿನ ಪುಡಿ ಪೂರೈಕೆಯಾಗಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
-ಪ್ರಭಾಕರ, ಪನಿರ್ದೇಶಕ, ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.