ಬೆಂಗಳೂರು: ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ವಿ. ಸುನೀಲ್ ಕುಮಾರ್, ಸಚಿವರ ಹನಿಟ್ರ್ಯಾಪ್ ವಿಷಯ ಪ್ರಸ್ತಾಪಿಸಿದರು.
‘ನಾವು ಇಲ್ಲಿ 224 ಶಾಸಕರಿದ್ದೇವೆ. ಸಾರ್ವಜನಿಕವಾಗಿ ಗೌರವದಿಂದ ಕೆಲಸ ಮಾಡುತ್ತಿದ್ದೇವೆ. ಈ ಸರ್ಕಾರದಲ್ಲಿ ನಿನ್ನೆ, ಮೊನ್ನೆಯಿಂದ ಹನಿಟ್ರ್ಯಾಪ್ ಬಗ್ಗೆ ಸುದ್ದಿ ಆಗುತ್ತಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಗೌರವದಿಂದ ಬದುಕುವುದು ಬೇಡವೇ? ಯಾರ‍್ಯಾರೊ ಹನಿಟ್ರ್ಯಾಪ್ ಮಾಡುತ್ತಿದ್ದಾರೆ ಎಂದರೆ ಏನು ಪರಿಸ್ಥಿತಿ? ಸಾರ್ವಜನಿಕ ಬದುಕೇ ಬೇಡ ಎನ್ನುವಷ್ಟು ಸುದ್ದಿ ಹರಿದಾಡುತ್ತಿದೆ. ಹೀಗಾದರೆ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ’ ಎಂದು ಪ್ರಶ್ನಿಸಿದರು.
‘ವಿರೋಧಿಗಳನ್ನು, ತಮ್ಮ ಪಕ್ಷದಲ್ಲಿರುವ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಬೇಕೆನ್ನುವ ಕಾರಣಕ್ಕೆ ಯಾವ ಮಟ್ಟಕ್ಕೂ ಹೋಗಬಹುದೇ? ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡರೆ, ಯಾರಿಗೆ ಬುದ್ಧಿ ಹೇಳುತ್ತೀರಿ? ಯಾರಿಗೆ ಉಪದೇಶ ಮಾಡುತ್ತೀರಿ? ಗೃಹ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ವಿರೋಧಿಗಳನ್ನು, ಸ್ವಪಕ್ಷೀಯರನ್ನು ಹತ್ತಿಕ್ಕಲು ಬೇರೆ ಮಾರ್ಗ ಇಲ್ಲವೇ? ಇದರ ಬಗ್ಗೆ ಒಂದುಗೂಡಿ ಕೈ ಜೋಡಿಸಬೇಕು. ಈ ಸರ್ಕಾರ ಅಪರಾಧಿಗಳಿಗೆ ಸಿಂಹಸ್ವಪ್ನ ಆಗಿದೆ ಎಂಬ ಸಂದೇಶ ಕಳುಹಿಸಬೇಕು. ಸಮಾಜಘಾತುಕ ಚಟುವಟಿಕೆ ಮಾಡಿದರೆ ಸಾಸಿವೆ ಕಾಳಷ್ಟು ಸಹಿಸಲ್ಲ ಎಂಬ ಎಚ್ಚರಿಕೆ ನೀಡಬೇಕು’ ಎಂದರು.
‘ಗಂಡಭೇರುಂಡ ಲಾಂಛನ ಹಾಕಿಕೊಂಡ ನಂತರ ಗಂಡಸ್ಥನದಿಂದ ಸರ್ಕಾರ ನಡೆಸಬೇಕು. ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವಂಥದ್ದು ಬೇಡ. ಗೃಹ ಇಲಾಖೆ ನಡೆಸಲು ಇಷ್ಟ ಇಲ್ಲವೇ ಅಥವಾ ಇಲಾಖೆಯಲ್ಲಿ ಯಾರಾದರೂ ಕೈ ಆಡಿಸುತ್ತಿದ್ದಾರೆಯೇ? ಇಲಾಖೆ ನಡೆಸಲು ಗೃಹ ಸಚಿವರಿಗೆ ಸ್ವಾತಂತ್ರ್ಯ ಇಲ್ಲವೇ’ ಎಂದೂ ವಾಗ್ದಾಳಿ ನಡೆಸಿದರು.
ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಎಸ್.ಎನ್.ಬೋಜೇಗೌಡ, ‘ಪ್ಲಾಸ್ಟಿಕ್ ಹೂಗಳನ್ನು ನಿಷೇಧಿಸಬೇಕು’ ಎಂದು ಬಜೆಟ್ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಮುಂದುವರೆದು, ‘ಪ್ಲಾಸ್ಟಿಕ್ ಹೂ ನಿಷೇಧಿಸಿದರೆ, ಹೂ ಬೆಳೆಗಾರರಿಗೆ ಅನುಕೂಲವಾಗಲಿದೆ. ಮುಂದೆ ಮುಖ್ಯಮಂತ್ರಿ ಆಗಲಿರುವ ಜಿ.ಪರಮೇಶ್ವರ ಅವರಿಗೆ ನಿಜದ ಹೂಗಳನ್ನು ನೀಡಬಹುದು’ ಎಂದು ಕಿಚಾಯಿಸಿದರು.
ಅವರ ಮಾತನ್ನು ಮಧ್ಯದಲ್ಲೇ ತಡೆದ ಬಿಜೆಪಿ ಸದಸ್ಯ ಸಿ.ಟಿ.ರವಿ, ‘ನೀವು ಅವರಿಗೆ ಈ ರೀತಿ ಒಳಏಟು ನೀಡಬಾರದು’ ಎಂದರು. ಬೋಜೇಗೌಡ, ‘ಇದು ಒಳ ಏಟಲ್ಲ, ಹೊರಏಟು’ ಎಂದರು.
ರವಿ ಅವರು, ‘ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನೀವು ನೀಡಿದ ಒಳಏಟಿನ ಕಾರಣದಿಂದಲೇ ಅದನ್ನೂ ಕಳೆದುಕೊಂಡರು, ಮುಖ್ಯಮಂತ್ರಿಯೂ ಆಗಲಿಲ್ಲ. ಇನ್ನು ಈಗ ಹೊರಏಟು ನೀಡಿದರೆ ಏನಾಗಬಹುದು? ಒಳಏಟಿನ ಕಾರಣದಿಂದಲೇ ನಾನು ಇಲ್ಲಿದ್ದೇನೆ. ಇಲ್ಲದಿದ್ದರೆ ಅಲ್ಲಿ (ವಿಧಾನ ಸಭೆಯಲ್ಲಿ) ಇರುತ್ತಿದ್ದೆ’ ಎಂದರು.
ಸಚಿವ ಬೈರತಿ ಸುರೇಶ್, ‘ರವಿ ಅವರು ತಮ್ಮ ಅನುಭವದ ಮಾತು ಹೇಳುತ್ತಿದ್ದಾರೆ’ ಎಂದು ಕಾಲೆಳೆದರು.
ನಗುತ್ತಲೇ ಕುಳಿತಿದ್ದ ಗೃಹ ಸಚಿವ ಪರಮೇಶ್ವರ ಅವರನ್ನು ನೋಡಿ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ನಿಮ್ಮನ್ನು ನೋಡಲು ನಿಜವಾದ ಹೂವುಗಳ ಗುಚ್ಛ ಹಿಡಿದುಕೊಂಡು ಬರುವುದು ಯಾವಾಗ ಹೇಳಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.