ADVERTISEMENT

ಇನ್ನು ರೈತರ ಮನೆ ಬಾಗಿಲಿಗೆ ಸರ್ಕಾರ

ಸರ್ಕಾರ– ರೈತರ ಮಧ್ಯೆ ಕಂದಕ ಇರಬಾರದು: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:34 IST
Last Updated 29 ನವೆಂಬರ್ 2018, 20:34 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ‘ಇನ್ನು ಮುಂದೆ ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ, ಸಲಹೆ ಪಡೆಯಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ಒಟ್ಟು 60 ರೈತ ಪ್ರತಿನಿಧಿಗಳ ಸಲಹಾ ಸಮಿತಿಯ ಮೊದಲ ಸಭೆ ಗುರುವಾರ ನಡೆಯಿತು. ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ತಿಂಗಳಿಗೊಮ್ಮೆ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಹೊಲದಲ್ಲಿ ಸುತ್ತಮುತ್ತಲಿನ ರೈತರ ಸಭೆ ಕರೆದು ಚರ್ಚೆ ನಡೆಸಲಾಗುವುದು’ ಎಂದರು.

‘ರೈತರೊಂದಿಗಿನ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಸಹಕಾರ ಸಚಿವರ ಜೊತೆ ನಾನೂ ಭಾಗವಹಿಸಿ ಸಲಹೆ, ಅಭಿಪ್ರಾಯಗಳನ್ನು ಪಡೆಯುತ್ತೇನೆ. ಆ ಮೂಲಕ, ಅವರ ಸಂಕಷ್ಟಗಳಿಗೆ ಪರಿಹಾರ ಸೂತ್ರ ಕಂಡುಕೊಳ್ಳುತ್ತೇವೆ’ ಎಂದು ವಿವರಿಸಿದರು.

ADVERTISEMENT

‘ಸರ್ಕಾರ ಮತ್ತು ರೈತರ ನಡುವೆ ಕಂದಕ ಇರಬಾರದು. ಕೃಷಿಕರು ನೆಮ್ಮದಿಯಾಗಿ ಬದುಕಬೇಕೆಂಬ ಕನಸು ಸರ್ಕಾರದ್ದು. ಹೊಸ ಕೃಷಿ ನೀತಿಯನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ’ ಎಂದರು.

‘ಬಜೆಟ್‌ನಲ್ಲಿ ಘೋಷಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮತ್ತು ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಜೊತೆಗೆ ಉಪ ಕಸುಬುಗಳಿಗೂ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಮುಂದಿನ ತಿಂಗಳು ಸಮಿತಿಯ ಇನ್ನೊಂದು ಸಭೆ ಕರೆಯಲಾಗುವುದು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಕುಲಪತಿಗಳು, ಸಂಶೋಧಕರು, ಅಧಿಕಾರಿಗಳು ಕ್ರೋಡೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಅದನ್ನು ಜಾರಿಗೊಳಿಸಲಾಗುವುದು’ ಎಂದರು.

ಕೃಷಿ ಸಚಿವ ಶಿವಶಂಕರ ರೆಡ್ಡಿ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಪಶುಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ, ಅರಣ್ಯ ಸಚಿವ ವಿ. ಶಂಕರ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಸಭೆಯಲ್ಲಿದ್ದರು.

**

ರೈತರ ಸಲಹೆಗಳು

* ಬೆಳೆಗೆ ಉತ್ತಮ ಬೆಲೆ, ವೈಜ್ಞಾನಿಕ ಬೆಳೆ ಪದ್ಧತಿಯ ಅರಿವು
* ರಫ್ತು ಮಾಡಲು ಪೂರಕವಾಗುವಂತೆ ಉತ್ಪನ್ನಗಳ ಗುಣಮಟ್ಟ ಸುಧಾರಣೆ
* ಸಾಮೂಹಿಕ ಕೃಷಿ ಪದ್ಧತಿ, ಕೃಷಿ ಉಪ ಕಸುಬುಗಳ ಬೆಳವಣಿಗೆಗೆ ಒತ್ತು
* ಮಾರುಕಟ್ಟೆ, ಉಗ್ರಾಣ, ಶೈತ್ಯಾಗಾರಗಳ ನಿರ್ಮಾಣ, ಉತ್ತಮ ಬಿತ್ತನೆ ಬೀಜಗಳ ಪೂರೈಕೆ

**

ಎರಡು ತಿಂಗಳಿಗೊಮ್ಮೆ ರೈತರ ಸಲಹಾ ಸಮಿತಿ ಸಭೆ ಆಯೋಜಿಸಲಾಗುವುದು. ರೈತರು ನೀಡಿರುವಸಲಹೆಗಳಿಗೆ ಸರ್ಕಾರ ಸ್ಪಂದಿಸಿ, ಕಾರ್ಯೋನ್ಮುಖವಾಗಲಿದೆ.

–ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.