
ಆರ್. ಅಶೋಕ
ಬೆಂಗಳೂರು: ‘ರಾಜ್ಯಪಾಲರಿಗೆ ಅಗೌರವ ತೋರಿಸಿರುವ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ನಮ್ಮ 18 ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸಿದರೆಂದು ಅಮಾನತು ಮಾಡಲಾಗಿತ್ತು. ಈಗ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಏನು ಕ್ರಮ? ಸಭಾಧ್ಯಕ್ಷರು ಇಂದೇ ರೂಲಿಂಗ್ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯಪಾಲರು ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ. ಆದರೆ, ಎಚ್.ಕೆ. ಪಾಟೀಲರು, ‘ರಾಜ್ಯಪಾಲರು ಓಡಿ ಹೋದರು’ ಎಂದಿದ್ದು ಸರಿಯಲ್ಲ. ರಾಷ್ಟ್ರಗೀತೆ ಆರಂಭವಾಗುತ್ತಿದ್ದರೆ ಅವರು ಸದನದಲ್ಲಿ ಇರುತ್ತಿದ್ದರು’ ಎಂದೂ ಸಮರ್ಥಿಸಿದರು.
‘ಅಧಿಕಾರದಲ್ಲಿರುವ ಯಾರೂ ಶಾಶ್ವತವಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಿಲ್ಲವೆಂದರೆ ಅಪರಾಧ ಆಗುತ್ತದೆ. ಸಭಾಧ್ಯಕ್ಷರೇ, ನೀವು ಅಪರಾಧಿ ಆಗಬೇಕಾಗುತ್ತದೆ. ಈ ಘಟನೆಯನ್ನು ಇಡೀ ಸದನ ಖಂಡಿಸಿ, ವಿಷಾದ ವ್ಯಕ್ತಪಡಿಸಬೇಕು’ ಎಂದೂ ಒತ್ತಾಯಿಸಿದರು.
ಬಿಜೆಪಿಯ ಸಿ.ಎನ್. ಅಶ್ವತ್ಥನಾರಾಯಣ, ಸುನಿಲ್ ಕುಮಾರ್, ಎಸ್. ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ, ಸುರೇಶ್ ಗೌಡ ಮತ್ತಿತರರೂ ದನಿಗೂಡಿಸಿದರು. ‘ಅನುಚಿತ ವರ್ತನೆ ತೋರಿಸಿದ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. ಮಾತಿನ ಭರದಲ್ಲಿ ಸುನೀಲ್ ಕುಮಾರ್, ‘ಇದು ಗೂಂಡಾ ಸರ್ಕಾರ’ ಎಂದಿದ್ದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಈ ವೇಳೆ ಸದನದಲ್ಲಿ ಜಟಾಪಟಿ ಹೆಚ್ಚಾಯಿತು.
ಕಾಂಗ್ರೆಸ್‌ನ ಶಿವಲಿಂಗೇಗೌಡ, ‘ರಾಜ್ಯಪಾಲರು ಪೂರ್ಣ ಭಾಷಣ ಓದಲಿಲ್ಲ ಹೋಗಲಿ, ರಾಷ್ಟ್ರಗೀತೆ ಹಾಡುವುದಕ್ಕೂ ಮೊದಲೇ ಹೋದರು. ರಾಜ್ಯಪಾಲರ ಮೇಲೆ ಮೊದಲು ಕ್ರಮ ಆಗಬೇಕು’ ಎಂದರು. ‘ರಾಜ್ಯಪಾಲರು ನಡೆದುಕೊಂಡಿದ್ದು ಸರಿಯೇ’ ಎಂದು ಕಾಂಗ್ರೆಸ್‌ನ ಎಚ್.ಸಿ. ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಕುರಿತ ತಮ್ಮ ಮಾತನ್ನು ಸಮರ್ಥಿಸಿಕೊಂಡ ಎಚ್.ಕೆ. ಪಾಟೀಲ, ‘ಸಂವಿಧಾನ ಮತ್ತು ಕಾನೂನಿಗಿಂತ ರಾಜ್ಯಪಾಲರೂ ಮೇಲಲ್ಲ. ರಾಜ್ಯಪಾಲರು ಭಾಷಣ ಓದದೇ ಸಂವಿಧಾನದ 176 (1)ನೇ ವಿಧಿ ಉಲ್ಲಂಘಿಸಿದ್ದಾರೆ. ರಾಷ್ಟ್ರಗೀತೆಗೂ ಮೊದಲೇ ಸದನದಿಂದ ತೆರಳಿ ಅವಮಾನ ಮಾಡಿದ್ದಾರೆ. ನಾನು ಅವರನ್ನು ತಡೆದಿಲ್ಲ. ರಾಜ್ಯಪಾಲರಿಗೆ ನಾನೂ ಅಡ್ಡಿ ಮಾಡಿದ್ದೇನೆ ಎನ್ನುವ ಅಶೋಕ ಆರೋಪ ಸರಿಯಲ್ಲ’ ಎಂದರು.
‘ರಾಜ್ಯಪಾಲರ ನಡೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿಯೇತರ ಆಡಳಿತವಿರುವ ಸರ್ಕಾರಗಳಲ್ಲಿ ಈ ರೀತಿ ಆಗುತ್ತಿದೆ. ರಾಜ್ಯಪಾಲರು ಹೇಗೆ ಸಂವಿಧಾನ ಉಲ್ಲಂಘಿಸಿದ್ದಾರೆ, ರಾಜ್ಯಪಾಲರ ಕಚೇರಿಗೆ ಕೇಂದ್ರದಿಂದ ಎಷ್ಟು ಕರೆ ಬಂದಿದೆ ಎಂದೂ ನಾನು ಮಾತನಾಡಬಲ್ಲೆ. ರಾಜಭವನ, ರಾಜ್ಯಪಾಲರನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದೂ ಗೊತ್ತಿದೆ. ಸತ್ಯ ಬಿಚ್ಚಿಟ್ಟರೆ ಬಿಜೆಪಿಯವರಿಗೆ ನೋವಾಗುತ್ತದೆ’ ಎಂದರು.
ಆಕ್ಷೇಪ ವ್ಯಕ್ತಪಡಿಸಿದ ಎಸ್. ಸುರೇಶ್ ಕುಮಾರ್, ‘ರಾಜಭವನಕ್ಕೆ ಫೋನ್ ಕರೆ ಬರುತ್ತಿದೆ ಎಂದು ಪಾಟೀಲರು ಹೇಳಿದ್ದಾರೆ. ಹಿಂದೆ ಎಚ್.ಆರ್. ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಬಂದಿದ್ದ ಫೋನ್ ಕರೆಗಳೂ ಒಳಗೊಂಡಿವೆಯೇ? ಎಂದು ಪ್ರಶ್ನಿಸಿದರು.
‘ರಾಜ್ಯಪಾಲರು ಮಾಡಿರುವ ಸಂವಿಧಾನ ಉಲ್ಲಂಘನೆಯನ್ನು ಮನ್ನಿಸಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರದವರು, ನಮ್ಮ ನೀತಿಗಳೇನು?, ಏನು ಮಾಡುತ್ತಿದ್ದೇವೆಂದು ರಾಜ್ಯಪಾಲರ ಮೂಲಕ ಕೇಂದ್ರಕ್ಕೆ ತಿಳಿಸುವ ಮಾರ್ಗವನ್ನು ಬಳಸಿಕೊಂಡಿದ್ದೇವೆ. ರಾಜ್ಯಪಾಲರನ್ನು ಮೆಚ್ಚಿಸಲು ಭಾಷಣ ಸಿದ್ಧ ಮಾಡಿಲ್ಲ. ರಾಜ್ಯಪಾಲರ ವಿರುದ್ಧ ನಾವು ಆರೋಪ ಮಾಡಿದ್ದೇವೆಯೇ, ವೈಯಕ್ತಿಕ ನಿಂದನೆ ಮಾಡಿದ್ದೇವೆಯೇ’ ಎಂದು ಪ್ರಶ್ನಿಸಿದರು.
ಆರೋಪ – ಪ್ರತ್ಯಾರೋಪದ ನಡುವೆ ಬಿಜೆಪಿಯ ಎಸ್. ಸುರೇಶ್ ಕುಮಾರ್ ಅವರು ಮಾತಿನ ಭರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಉದ್ದೇಶಿಸಿ ಆಡಿದ ಮಾತೊಂದು ಕಲಹಕ್ಕೆ ಕಾರಣವಾಯಿತು.
ಸುರೇಶ್ ಕುಮಾರ್ ಮಾತಿನಿಂದ ಕೆರಳಿದ ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಸದಸ್ಯರು, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯಪಾಲರ ಕುರಿತಾಗಿ ಸುರೇಶ್ ಕುಮಾರ್ ಆಡಿದ ಮಾತಿಗೆ ತಕರಾರು ಇಲ್ಲ. ಬೈರತಿ ಸುರೇಶ್‌ಗೆ ಉದ್ದೇಶಿಸಿ ಅವರು ಬಳಸಿರುವ ಪದಗಳು ಸರಿಯಲ್ಲ. ಅದನ್ನು ಕಡತದಿಂದ ತೆಗೆಯಬೇಕು. ಈ ವಿಷಯದಲ್ಲಿ ಚರ್ಚೆ ಮುಂದುವರಿಸುವುದು ಬೇಡ’ ಎಂದು ಸಲಹೆ ನೀಡಿದರು. ಆ ಪದವನ್ನು ಕಡತದಿಂದ ತೆಗೆಯಲು ಸಭಾಧ್ಯಕ್ಷರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.