
ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಜಂಟಿ ಅಧಿವೇಶನಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ರಾಜ್ಯಪಾಲರು ಓದಲು ಯೋಗ್ಯವಲ್ಲದ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುವಂತಹ ಅಂಶಗಳಿದ್ದವು. ಅವುಗಳನ್ನೂ ಓದಬೇಕು ಎನ್ನುವುದು ಖಂಡನೀಯ. ರಾಜ್ಯಪಾಲರು ಭಾಷಣ ಮಾಡುವುದು ಅವರ ವಿವೇಚನಾ ಅಧಿಕಾರಕ್ಕೆ ಬಿಟ್ಟಿದ್ದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾಷಣ ಓದುವ ವಿಷಯದಲ್ಲಿ ರಾಜ್ಯಪಾಲರು ಸಂವಿಧಾನದ 163ನೇ ವಿಧಿಯನ್ನು ಪಾಲಿಸಿದ್ದಾರೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವರು ರಾಜ್ಯಪಾಲರ ನಡಾವಳಿಕೆಯ ಬಗ್ಗೆ ಮಾತನಾಡಿರುವುದು ಖಂಡನೀಯ. ಅದರಲ್ಲೂ ಅವರೊಬ್ಬ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರು, ಅವರ ವಿರುದ್ಧ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
‘ರಾಜ್ಯಪಾಲರು ಸಂವಿಧಾನದ ಆಶಯ ಗಾಳಿಗೆ ತೂರಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯಪಾಲರ ನಡಾವಳಿಕೆ ವಿರುದ್ಧ ಹೇಳಿಕೆ ನೀಡುತ್ತಾ ಗುಂಡಾವರ್ತನೆ ತೋರಿಸುವವರ ವಿರುದ್ಧ ಮುಖ್ಯಮಂತ್ರಿ ಕ್ರಮವಹಿಸಬೇಕು’ ಎಂದೂ ಒತ್ತಾಯಿಸಿದರು.
‘ನರೇಗಾ’ ಯೋಜನೆಯಲ್ಲಿನ ಅಂಶಗಳು ವಿಬಿ–ಜಿ ರಾಮ್ ಜಿ’ ಯೋಜನೆಯ ಕಾಯ್ದೆಯಲ್ಲಿವೆ. ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ–2047’ ನಿರ್ಮಾಣದ ಎಲ್ಲಾ ಪರಿಕಲ್ಪನೆಯನ್ನು ಈ ಕಾಯ್ದೆ ಒಳಗೊಂಡಿದೆ. ಈ ಬಗ್ಗೆ ಕಾಂಗ್ರೆಸ್‌ನವರಿಗೆ ಸರಿಯಾದ ತಿಳಿವಳಿಕೆಯಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ನೂತನ ಕಾಯ್ದೆ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಮಹಾತ್ಮಗಾಂಧಿ ಅವರಿಗೆ ಶ್ರೀರಾಮ ಪ್ರಿಯವಾದ ವ್ಯಕ್ತಿ. ಅವರ ಹೆಸರನ್ನೇ ವಿಬಿ–ಜಿ ರಾಮ್ ಜಿ ಕಾಯ್ದೆಯಲ್ಲಿ ಸೇರಿಸಲಾಗಿದೆ. ನಕಲಿ ಗಾಂಧಿಗಳು ಇದನ್ನು ತಿಳಿಯಬೇಕು’ ಎಂದರು.
‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಆಕ್ಷೇಪಣೆಯನ್ನು ತೆಗೆಸಿದರೆ, ಯೋಜನೆಗೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ಅನುಮತಿ ಬಗ್ಗೆ ಚರ್ಚಿಸಬಹುದು’ ಎಂದರು.
‘ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿ ನಾಪತ್ತೆ ಪ್ರಕರಣದಲ್ಲಿ ಸ್ಪಷ್ಟತೆ ಇಲ್ಲ. ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಏನೂ ಹೇಳಲು ಆಗಲ್ಲ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.