ADVERTISEMENT

ಪ್ರಸಾದ ತಯಾರಿಕೆ, ವಿತರಣೆಗೆ ಮಾರ್ಗಸೂಚಿ: ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 7:25 IST
Last Updated 27 ಜನವರಿ 2019, 7:25 IST
   

ಬೆಳಗಾವಿ: ‘ಪ್ರಸಾದ ಸೇವಿಸಿ ಸಾವು ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಹೀಗಾಗಿ, ಪ್ರಸಾದ ತಯಾರಿಕೆ ಮತ್ತು ವಿತರಣೆ ಕುರಿತು ಮಾರ್ಗಸೂಚಿಗಳನ್ನು ರಚಿಸುವ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು’ ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.‌

ಖಾಸಗಿ ಕಾರ್ಯಕ್ರಮಕ್ಕೆಂದು ಇಲ್ಲಿಗೆ ಭಾನುವಾರ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಚಿಂತಾಮಣಿಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಸಾವಿಗೀಡಾಗಿರುವ ಪ್ರಕರಣ ಗಮನಕ್ಕೆ ಬಂದಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಚಿಂತಾಮಣಿಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ತಯಾರಿಸಿ ತಂದಿದ್ದ ಪ್ರಸಾದ ವಿತರಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಮೋಡಿ ಮಾಡಲಿದೆ

‘ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದರಿಂದ, ಬಿಜೆಪಿಯವರಿಗೆ ಭಯ ಶುರುವಾಗಿದೆ. ದೇಶದಾದ್ಯಂತ ಸಂಚಲನ ಮೂಡಿದೆ ಹಾಗೂ ಕಾಂಗ್ರೆಸ್‌ಗೆ ಶಕ್ತಿ ಬಂದಿದೆ’ ಎಂದು ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೋಡಿ ಮೋಡಿ ಮಾಡಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನೇ ಹೋಲುವ ಪ್ರಿಯಾಂಕಾ ಅವರು ರಾಜಕಾರಣದಲ್ಲಿ ಮುಂದೆ ಬರಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ. ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಉತ್ತಮ ಆಡಳಿತ ನಡೆಸುವಲ್ಲಿ ವಿಫಲವಾಗಿರುವ ಬಿಜೆಪಿಯ ಆಟ ಮುಂದೆ ನಡೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೋಡಿ ಮೋಡಿ ಮಾಡಲಾಗುವುದಿಲ್ಲ’ ಎಂದರು.

ಶ್ರೀಗಳಿಗೆ ಮಾಡಿದ ಅಪಮಾನ

‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕಿತ್ತು. ಇದು ರಾಜ್ಯದ ಜನರೆಲ್ಲರ ಆಗ್ರಹವೂ ಆಗಿತ್ತು. ಆದರೆ, ಕೊಡಲಿಲ್ಲವೇಕೆ ಎನ್ನುವುದು ಗೊತ್ತಿಲ್ಲ. ರಾಜ್ಯ ಸರ್ಕಾರದಿಂದ ಹಲವು ಬಾರಿ ಶಿಫಾರಸು ಕಳುಹಿಸಿದ್ದರೂ ಪರಿಗಣಿಸಿಲ್ಲ. ಇದು ಕೇಂದ್ರ ಸರ್ಕಾರವು ಸಿದ್ಧಗಂಗಾ ಮಠ ಹಾಗೂ ರಾಜ್ಯಕ್ಕೆ ಮಾಡಿರುವ ಅಪಮಾನ’ ಎಂದು ಟೀಕಿಸಿದರು.

‘ಆಪರೇಷನ್‌ ಕಮಲಕ್ಕೆ ಯತ್ನಿಸಿದ ಬಿಜೆಪಿಯವರೇ, ಆಪರೇಷನ್‌ ಒಳಗಾಗಿದ್ದಾರೆ. ಅವರ ತಂತ್ರಗಳು ಫಲ ನೀಡುವುದಿಲ್ಲ’ ಎಂದರು.

‘ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ವಾರ್ಷಿಕ ಬರುವ ವರಮಾನ ಆಧರಿಸಿ ದೇವಸ್ಥಾನಗಳನ್ನು ಎ, ಬಿ ಹಾಗೂ ಸಿ ವರ್ಗದವೆಂದು ವಿಂಗಡಿಸಲಾಗಿದೆ. ಎ ಹಾಗೂ ಬಿ ದೇವಸ್ಥಾನಕ್ಕೆ ಬರುವ ಆದಾಯದ ಇಂತಿಷ್ಟನ್ನು ಸಿ ವರ್ಗದ ದೇಗುಲಗಳ ಅಭಿವೃದ್ಧಿಗೆ ಕೊಡಬೇಕು ಎನ್ನುವ ಪ್ರಸ್ತಾವವೂ ಇದೆ. ಇದೆಲ್ಲದರ ಕುರಿತು ಸಮಗ್ರ ವರದಿ ಪಡೆಯಲು, ಮೂಲಸೌಲಭ್ಯ ಕಲ್ಪಿಸಲು ಏನೇನು ಕಾರ್ಯಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲಾಗುವುದು. ದೇವಸ್ಥಾನಗಳಲ್ಲಿ ಸಹಾಯವಾಣಿ ಸ್ಥಾಪಿಸಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.