ADVERTISEMENT

ಪರಮೇಶ್ವರ ಜೊತೆಗೆ ವಾಗ್ವಾದ ಸುದ್ದಿ ಸಂಪೂರ್ಣ ಸುಳ್ಳು: ಸಿದ್ದರಾಮಯ್ಯ

‘ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 16:35 IST
Last Updated 27 ಡಿಸೆಂಬರ್ 2018, 16:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ: ‘ಪರಮೇಶ್ವರ ಮತ್ತು ನನ್ನ ಮಧ್ಯೆ ಖಾತೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ನಾವು ನಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಮಾಡುವರು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಲಾಗದ ಬಿಜೆಪಿ ಸರ್ಕಾರ ಬೀಳಲಿದೆ ಎಂಬ ಭ್ರಮೆಯಲ್ಲಿ ಮುಳುಗಿದೆ. ಸರ್ಕಾರ ಇಂದು ಬೀಳಲಿದೆ, ನಾಳೆ ಬೀಳಲಿದೆ ಎಂದು ಕಳೆದ ಕಳೆದ ಏಳು ತಿಂಗಳಿನಿಂದ ಕನಸು ಕಾಣುತ್ತಿದೆ. ಅಧಿಕಾರ ಕಳೆದುಕೊಂಡು ಹಲವು ವರ್ಷಗಳೇ ಆಗಿರುವುದರಿಂದ ಉಮೇಶ್ ಕತ್ತಿ ಏನೇನೋ ಮಾತನಾಡುತ್ತಿದ್ದಾರೆ’ ಎಂದರು.

‘ರಮೇಶ ಜಾರಕಿಹೊಳಿ ಕಾಂಗ್ರೆಸ್ ಕಟ್ಟಾಳು. ಅವರು ಪಕ್ಷದಲ್ಲೇ ಇದ್ದು ಕೆಲಸ ಮಾಡಲಿದ್ದಾರೆ. ಸಚಿವ ಸ್ಥಾನ ಕೈತಪ್ಪಿರುವುದರಿಂದ ಸಹಜವಾಗಿಯೇ ಸ್ವಲ್ಪ ಅಸಮಾಧಾನಗೊಂಡಿರಬಹುದು. ನನ್ನ ಸಂಪರ್ಕಕ್ಕೂ ಅವರು ಈ ವರೆಗೆ ಸಿಕ್ಕಿಲ್ಲ’ ಎಂದರು.

ADVERTISEMENT

‘ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್– ಜೆಡಿಎಸ್ ಒಟ್ಟಿಗೆ ಎದುರಿಸಲಿವೆ. ಸೀಟು ಹಂಚಿಕೆ ತೀರ್ಮಾನಿಸಲು ಇನ್ನೂ ಸಭೆಯೇ ನಡೆದಿಲ್ಲ. ಸಭೆಯಲ್ಲಿ ಅವರಿಗೆ ಎಷ್ಟು, ನಮಗೆಷ್ಟು ಸೀಟು ಎಂಬುದನ್ನು ಅಂತಿಮಗೊಳಿಸಲಾಗುವುದು’ ಎಂದರು.

‘ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.