ADVERTISEMENT

ಹಂಪಿಯಲ್ಲಿರುವ ಅನಧಿಕೃತ ‘ಫಾರ್ಮ್‌ ಸ್ಟೇ‘ ತೆರವು: ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 15:45 IST
Last Updated 10 ಜುಲೈ 2023, 15:45 IST
ಬೈರತಿ ಸುರೇಶ್‌ 
ಬೈರತಿ ಸುರೇಶ್‌    

ಬೆಂಗಳೂರು: ಹಂಪಿ ವಿಶ್ವ ಪಾರಂಪರಿಕ ತಾಣ ವ್ಯಾಪ್ತಿಯಲ್ಲಿರುವ ಅನಧಿಕೃತ ‘ಫಾರ್ಮ್‌ ಸ್ಟೇ’, ಹೋಟೆಲ್‌ ಮತ್ತು ರೆಸಾರ್ಟ್‌ಗಳನ್ನು ತೆರವು ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಸೋಮವಾರ ವಿಧಾನಸಭೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ, ‘ಆನೆಗೊಂದಿ’ ವ್ಯಾಪ್ತಿಯಲ್ಲಿ ಜನರು ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅಲ್ಲಿನ ಫಾರ್ಮ್‌ ಸ್ಟೇಗಳನ್ನು ಸರ್ಕಾರ ತೆರವು ಮಾಡುತ್ತಿದೆ. ರೈತರಿಗೆ ಫಾರ್ಮ್‌ ಸ್ಟೇಗಳನ್ನು ನಡೆಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಉತ್ತರ ನೀಡಿದ ಸಚಿವರು, ‘2003ರಲ್ಲಿ ಅಸ್ತಿತ್ವಕ್ಕೆ ಬಂದ ಹಂಪಿ ಅಭಿವೃದ್ಧಿ ಪ್ರಾಧಿಕಾರವು 2007ರಲ್ಲಿ ಮಹಾಯೋಜನೆ ರೂಪಿಸಿದೆ. ಅದರಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳೂ ಪ್ರಾಧಿಕಾರದ ವ್ಯಾಪ್ತಿಗೆ ಸೇರಿವೆ. ಆ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣಗಳಿಗೆ ಅವಕಾಶ ಇರುವುದಿಲ್ಲ’ ಎಂದರು.

ADVERTISEMENT

ಅನಧಿಕೃತವಾಗಿ ನಿರ್ಮಿಸಿರುವ 58 ಹೋಟೆಲ್‌, ರೆಸಾರ್ಟ್‌ ಮತ್ತು ಫಾರ್ಮ್‌ ಸ್ಟೇಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 27 ಕಟ್ಟಡಗಳನ್ನು ತೆರವು ಮಾಡಲಾಗಿದೆ. 31 ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ. 21 ಕಟ್ಟಡಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿವೆ ಎಂದು ತಿಳಿಸಿದರು.

ಮಹಾ ಯೋಜನೆ (ಸಿಡಿಪಿ) ಪ್ರಕಾರ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಭೂ ಪರಿವರ್ತನೆಗೆ ಅವಕಾಶವಿಲ್ಲ. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸದೇ ಇರುವ ಕುರಿತು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಆ ಬಳಿಕ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಅಲ್ಲಿ ಆದ ತೀರ್ಮಾನದಂತೆ ಎಲ್ಲ ಅನಧಿಕೃತ ನಿರ್ಮಾಣಗಳನ್ನೂ ತೆರವು ಮಾಡಲು ನಿರ್ಧರಿಸಲಾಗಿದೆ ಎಂದು ಸುರೇಶ್‌ ವಿವರಿಸಿದರು.

‘ಆನೆಗೊಂದಿ ಭಾಗವನ್ನು ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿರುವುದೇ ತಪ್ಪು. ಅಲ್ಲಿನ 2,000 ಕುಟುಂಬಗಳು ಹಾಗೂ 10,000ಕ್ಕೂ ಹೆಚ್ಚು ಜನರು ಪ್ರವಾಸೋದ್ಯಮ ಅವಲಂಬಿಸಿದ್ದಾರೆ. ಎಲ್ಲರೂ ಪ್ರತಿಭಟನೆ ಆರಂಭಿಸಲು ಮುಂದಾಗಿದ್ದರು. ಜಿ–20 ಸಭೆ ನಡೆಯುವಾಗ ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣದಿಂದ ಪ್ರತಿಭಟನೆ ಕೈಬಿಡುವಂತೆ ನಾನು ಮತ್ತು ವಿಜಯನಗರ ಶಾಸಕ ಎಚ್‌.ಆರ್‌. ಗವಿಯಪ್ಪ ಮನವಿ ಮಾಡಿದ್ದೆವು. ಈಗ ಸರ್ಕಾರ ಅವರ ನೆರವಿಗೆ ನಿಲ್ಲಬೇಕು’ ಎಂದು ರೆಡ್ಡಿ ಒತ್ತಾಯಿಸಿದರು.

‘ಆನೆಗೊಂದಿ ರಾಜ್ಯದ ಪ್ರಮುಖ ಮಾದಕವಸ್ತು ಮಾಫಿಯಾ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಡ್ರಗ್‌ ಹಾವಳಿ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.