ADVERTISEMENT

ಬಗರ್‌ ಹುಕುಂ: ತಿರಸ್ಕೃತ ಅರ್ಜಿಗೆ ಮತ್ತೆ ಜೀವ

9.85 ಲಕ್ಷ ಅರ್ಜಿ ಬಾಕಿ* 54 ಲಕ್ಷ ಎಕರೆ ಜಮೀನು ಮಂಜೂರಾತಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:27 IST
Last Updated 19 ಫೆಬ್ರುವರಿ 2024, 16:27 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ‘ಬಗರ್‌ ಹುಕುಂ’ ಯೋಜನೆಯಡಿಯಲ್ಲಿ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಪುನರ್‌ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಬಿಜೆಪಿಯ ಬಿ.ಪಿ. ಹರೀಶ್‌ ಪ್ರಶ್ನೆಗೆ ವಿಧಾನಸಭೆಯಲ್ಲಿ ಸೋಮವಾರ ಉತ್ತರಿಸಿದ ಅವರು, ‘ಬಡವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಜಮೀನಿನ ಮೇಲೆ ಹಕ್ಕು ನೀಡುವುದಕ್ಕಾಗಿಯೇ ಬಗರ್‌ ಹುಕುಂ ಯೋಜನೆ ಜಾರಿಗೊಳಿಸಲಾಗಿದೆ. ನಿಯಮ ಮೀರಿ ಯಾವುದೇ ಅರ್ಜಿಗಳು ತಿರಸ್ಕೃತವಾಗಿದ್ದರೂ ಪುನರ್‌ ಪರಿಶೀಲನೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು’ ಎಂದರು.

138 ತಾಲ್ಲೂಕುಗಳಲ್ಲಿ ಈಗಾಗಲೇ ಬಗರ್‌ ಹುಕುಂ ಸಮಿತಿಗಳ ರಚನೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಸಮಿತಿಗಳ ರಚನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಗೋಮಾಳ ಜಮೀನು, ನಗರ ಭೂಮಿತಿ ಕಾಯ್ದೆ ವ್ಯಾಪ್ತಿಯಲ್ಲಿರುವ ಜಮೀನುಗಳ ಮಂಜೂರಾತಿಗೂ ಅರ್ಜಿಗಳನ್ನು ಸಲ್ಲಿಸಲಾಗಿದೆ. ಗೋಮಾಳದಲ್ಲಿ ಹೆಚ್ಚುವರಿ ಜಮೀನುಗಳನ್ನು ಮಾತ್ರ ಮಂಜೂರು ಮಾಡಬಹುದು. ಇಲ್ಲವಾದರೆ ನ್ಯಾಯಾಲಯಗಳಲ್ಲಿ ಸರ್ಕಾರ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದರು.

ಬಲಾಢ್ಯರಿಂದ ದುರ್ಬಳಕೆ: ‘ಬಡವರಿಗಾಗಿ ಜಾರಿಯಲ್ಲಿರುವ ಬಗರ್‌ ಹುಕುಂ ಯೋಜನೆಯನ್ನು ಬಲಾಢ್ಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆ ಆಗುತ್ತಿದೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಒಬ್ಬ ವ್ಯಕ್ತಿ 25 ಅರ್ಜಿ ಸಲ್ಲಿಸಿದ ಉದಾಹರಣೆಗಳಿವೆ. 18 ವರ್ಷ ವಯಸ್ಸಾಗದವರು 18 ವರ್ಷ ಸಾಗುವಳಿ ಮಾಡಿರುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗ ಒಟ್ಟು 9.85 ಲಕ್ಷ ಅರ್ಜಿಗಳು ಬಾಕಿ ಇದ್ದು, 54 ಲಕ್ಷ ಎಕರೆ ಜಮೀನು ಮಂಜೂರಾತಿಗೆ ಬೇಡಿಕೆ ಇದೆ. ಅಷ್ಟು ವಿಸ್ತೀರ್ಣದ ಸರ್ಕಾರಿ ಜಮೀನು ರಾಜ್ಯದಲ್ಲಿಲ್ಲ ಎಂದರು.

94 ಸಿ 94 ಸಿಸಿ: ಮತ್ತೆ ವಿಸ್ತರಣೆ ಇಲ್ಲ

‘ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ವಿತರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್‌ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ಪ್ರಸ್ತಾವ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬಿಜೆಪಿಯ ಯಶ್‌ಪಾಲ್‌ ಎ. ಸುವರ್ಣ ಪ್ರಶ್ನೆಗೆ ವಿಧಾನಸಭೆಯಲ್ಲಿ ಸೋಮವಾರ ಉತ್ತರಿಸಿದ ಅವರು ‘ಈ ಎರಡೂ ಯೋಜನೆಗಳ ಅಡಿಯಲ್ಲಿ ಅನರ್ಹರೇ ಹೆಚ್ಚು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಈಗ ಅರ್ಜಿ ಸಲ್ಲಿಕೆ ಅವಕಾಶ ನೀಡಿದರೆ ಅದು ಮುಂದುವರಿಯುತ್ತದೆ’ ಎಂದರು.

94ಸಿ ಅಡಿಯಲ್ಲಿ 6.26 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. 1.63 ಲಕ್ಷ ಅರ್ಜಿಗಳನ್ನು ಮಾನ್ಯ ಮಾಡಿ ಮಂಜೂರಾತಿ ನೀಡಲಾಗಿದೆ. 4.12 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. 94ಸಿಸಿ ಅಡಿಯಲ್ಲಿ 2.12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. 69236 ಅರ್ಜಿದಾರರಿಗೆ ಮಂಜೂರಾತಿ ನೀಡಿದ್ದು 1.28 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳಿದರು.

‘ಬಡವರ ಹೆಸರಿನಲ್ಲಿ ಅನರ್ಹರೇ ಅರ್ಜಿ ಸಲ್ಲಿಸಿದ್ದಾರೆ. ನೆಲಮಂಗಲ ತಾಲ್ಲೂಕಿನಲ್ಲಿ ಸ್ವಂತ ಮನೆ ಹೊಂದಿದ್ದ ಶ್ರೀಮಂತರಿಗೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸದಿದ್ದರೂ ಹಕ್ಕುಪತ್ರ ವಿತರಿಸಿದ ಪ್ರಕರಣಗಳು ಪತ್ತೆಯಾಗಿವೆ’ ಎಂದು ಹೇಳಿದರು.

ಅಕ್ರಮ–ಸಕ್ರಮ:ಕೋರ್ಟ್‌ನಲ್ಲಿ ಹಿನ್ನಡೆ?

‘ನಗರ ಪ್ರದೇಶಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ಬಡಾವಣೆಗಳನ್ನು ಸಕ್ರಮಗೊಳಿಸಲು ರೂಪಿಸಿರುವ ‘ಅಕ್ರಮ– ಸಕ್ರಮ’ ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬುದಾಗಿ ವಕೀಲರು ತಿಳಿಸಿದ್ದಾರೆ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

94 ಸಿ ಮತ್ತು 94ಸಿಸಿ ಅರ್ಜಿಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಕೊಡುವಾಗ ಈ ವಿಷಯ ಪ್ರಸ್ತಾಪಿಸಿದ ಅವರು ‘ಅಕ್ರಮ– ಸಕ್ರಮ ಯೋಜನೆಯನ್ನು ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ತೀರ್ಮಾನ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಸರ್ಕಾರದ ಪರ ವಕೀಲರಿಂದ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.