ADVERTISEMENT

ಗ್ಲೈಫೋಸೆಟ್‌ ನಿರ್ಬಂಧಕ್ಕೆ ಅಗತ್ಯ ಕ್ರಮ: ಕೃಷಿ ಸಚಿವ ಬಿ.ಸಿ. ಪಾಟೀಲ

ಗ್ಲೈಫೋಸೆಟ್‌ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ‘ಪ್ರಜಾವಾಣಿ’ ವರದಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:38 IST
Last Updated 23 ಮಾರ್ಚ್ 2022, 19:38 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಬೆಂಗಳೂರು: ಗ್ಲೈಫೋಸೆಟ್‌ ಕಳೆನಾಶಕದ ದುಷ್ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ವರದಿ ಪಡೆದ ಬಳಿಕ ಅದರ ಬಳಕೆಯನ್ನು ನಿರ್ಬಂಧಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಗ್ಲೈಫೋಸೆಟ್‌ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಆಧರಿಸಿ ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ, ‘ಈ ಕಳೆನಾಶಕದ ಬಳಕೆಯನ್ನು ತಕ್ಷಣ ನಿಷೇಧಿಸಿ’ ಎಂದು ಆಗ್ರಹಿಸಿದರು.

‘ಇದೊಂದು ಅತ್ಯಂತ ಅಪಾಯಕಾರಿ ರಾಸಾಯನಿಕ. ಕೇರಳ, ಹರಿಯಾಣ, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳು ಈ ಕಳೆನಾಶಕವನ್ನು ನಿಷೇಧಿಸಿವೆ. ಇದರ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಎರೆ ಹುಳುಗಳೂ ಸಾಯುತ್ತಿವೆ. ಜಲಮೂಲಗಳು ವಿಷಕಾರಿಯಾಗುತ್ತಿವೆ. ಕೃಷಿ ಇಲಾಖೆ ಇನ್ನೂ ಬದುಕಿದೆಯಾ’ ಎಂದು ಪ್ರಶ್ನಿಸಿದರು.

ADVERTISEMENT

ಉತ್ತರ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ, ‘ಗ್ಲೈಫೋಸೆಟ್‌ ಬಳಕೆಯನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಅನುಮೋದಿಸಿದೆ. ಬೆಳೆಗಳಿಲ್ಲದ ಮತ್ತು ಚಹಾ ತೋಟಗಳಲ್ಲಿ ಬಳಕೆಗೆ ಅನುಮತಿ ಇದೆ. ಈ ರಾಸಾಯನಿಕದ ಬಳಕೆಯಿಂದ ಆಗುವ ತೊಂದರೆಗಳ ಕುರಿತು ರೈತರಿಂದ ಯಾವುದೇ ದೂರು ಬಂದಿಲ್ಲ’ ಎಂದರು. ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ರೈತರಿಂದ ದೂರು ಬಂದಿಲ್ಲ ಎಂಬ ಉತ್ತರ ಹೇಳಬೇಡಿ. ಆಹಾರ ವಿಷವಾಗುತ್ತಿದೆ. ಸರಿಯಾದ ಕ್ರಮ ಕೈಗೊಳ್ಳಬೇಕು’ ಎಂದರು.

ಪುನಃ ಪ್ರತಿಕ್ರಿಯಿಸಿದ ಪಾಟೀಲ, ‘ಗ್ಲೈಫೋಸೆಟ್‌ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ಕೇಂದ್ರೀಯ ವಿಷ ವಿಜ್ಞಾನ ಸಂಶೋಧನಾ ಸಂಸ್ಥೆಯಿಂದ ವೈಜ್ಞಾನಿಕ ಅಧ್ಯಯನ ಮಾಡಿಸಿ, ವರದಿ ಪಡೆಯಲಾಗುವುದು. ಬಳಿಕ ಅಗತ್ಯ ಕಂಡುಬಂದಲ್ಲಿ ಈ ರಾಸಾ
ಯನಿಕದ ಬಳಕೆ ನಿರ್ಬಂಧಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ರಂಗನಾಥಸ್ವಾಮಿ ಭೂಮಿ: ತನಿಖೆಗೆ ಎಸ್‌ಐಟಿ
ಬೆಂಗಳೂರು:
ಶ್ರೀರಂಗಪಟ್ಟಣದ ಪುರಾತನ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಾನ ರೂಪದಲ್ಲಿ ನೀಡಿದ್ದ 1,198 ಎಕರೆ ಜಮೀನಿನಲ್ಲಿ ನೂರಾರು ಎಕರೆಯನ್ನು ಭೂಗಳ್ಳರಿಗೆ ಅಕ್ರಮವಾಗಿ ಪರಭಾರೆ ಮಾಡಿರುವ ಪ್ರಕರಣದ ತನಿಖೆಯನ್ನು ‘ವಿಶೇಷ ತನಿಖಾ ತಂಡ’ಕ್ಕೆ (ಎಸ್‌ಐಟಿ) ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಎನ್. ರವಿಕುಮಾರ್ ಅವರು, ‘ದೇವರು, ದೇವಸ್ಥಾನಕ್ಕೆ ಸೇರಿದ ಜಾಗವನ್ನು ಭೂಗಳ್ಳರಿಗೆ ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಒಮ್ಮೆ ದಾನವಾದ ಜಮೀನನ್ನು ಮತ್ತೆ ದಾನ ನೀಡುವುದು ಅಕ್ಷಮ್ಯ ಅಪರಾಧ. ತಪ್ಪು ಮಾಡಿದ ಅಧಿಕಾರಿಗಳು ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳೇ ಸರ್ಕಾರ, ಪೊಲೀಸ್, ನ್ಯಾಯಾಧೀಶರು ಎಲ್ಲವೂ ಆಗಿದ್ದಾರೆ. ಆದ್ದರಿಂದ, ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಉತ್ತರಿಸಿದ ವಸತಿ ಸಚಿವ ವಿ. ಸೋಮಣ್ಣ, ‘ಪ್ರಕರಣವನ್ನು ಎಸ್‌ಐಟಿಗೆ ವಹಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

ಬೆಂಗಳೂರಿನ ಮಲ್ಲೇಶ್ವರ ನಿವಾಸಿಯಾದ ದ್ವಾರಕಾಬಾಯಿ ವೇದಾಂತಂ ಅವರು ಹಿಂದಿನ ಮಾಗಡಿ ತಾಲ್ಲೂಕಿನ, ಹಾಲಿ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸೇರಿದ ತಾವರಕೆರೆ ಹೋಬಳಿ ಬ್ಯಾಲಾಳು, ಚೋಳನಾಯಕನಹಳ್ಳಿ, ಪೆದ್ದನಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕಾಡುಕರೇನಹಳ್ಳಿ (ಕುರುಬರಹಳ್ಳಿ) ಗ್ರಾಮಗಳಿಗೆ ಸೇರಿ 1,198 ಎಕರೆ 34 ಗುಂಟೆ ಜಮೀನನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಗಳಿಗೆ 1939ರಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ದಾನ ನೀಡಿದ್ದರು. ಅದರಲ್ಲಿ ನೂರಾರು ಎಕರೆ ಜಮೀನು ಭೂಗಳ್ಳರ ಪಾಲಾಗಿದೆ. ಜಮೀನು ವಶಕ್ಕೆ ಪಡೆದು ದೇವಸ್ಥಾನ ಮತ್ತು ದೇವರ ಹೆಸರಿನಲ್ಲಿ ಖಾತೆ, ಪಹಣಿ ಮಾಡಿಸಿ ದೇವಸ್ಥಾನಕ್ಕೆ ಒಪ್ಪಿಸಬೇಕು’ ಎಂದು ರವಿಕುಮಾರ್ ಒತ್ತಾಯಿಸಿದರು. ದಾನ ರೂಪದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ನೀಡಿರುವ ಜಾಗ ಭೂಗಳ್ಳರ ಪಾಲಾಗಿರುವ ಬಗ್ಗೆ ಈ ಹಿಂದೆಯೇ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.