ವಿಧಾನಸೌಧ
ಬೆಂಗಳೂರು: ಸಮಗ್ರ ಬೆಂಗಳೂರಿನ ಆಡಳಿತ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ಹಾಗೂ ಬಿಬಿಎಂಪಿಯ ವ್ಯಾಪ್ತಿಯನ್ನು ಹಿಗ್ಗಿಸಿ ಏಳು ನಗರ ಪಾಲಿಕೆಗಳನ್ನು ಸೃಜಿಸಲು ಅವಕಾಶ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ–2025’ಕ್ಕೆ ವಿರೋಧ ಪಕ್ಷಗಳ ಸಭಾತ್ಯಾಗದ ಮಧ್ಯೆಯೇ ವಿಧಾನಸಭೆಯು ಸೋಮವಾರ ಅಂಗೀಕಾರ ನೀಡಿತು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡಿಸಿದ ಮಸೂದೆ ಕುರಿತು ಸದನದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಬಿಬಿಎಂಪಿ ವಿಭಜಿಸದಂತೆ ಬಿಜೆಪಿಯ ಹಲವು ಸದಸ್ಯರು ಆಗ್ರಹಿಸಿದರು. ವಿಭಜಿಸುವುದಾದರೆ ಸಂಪನ್ಮೂಲದ ಸಮಾನ ಹಂಚಿಕೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡುವಂತೆ ಕೆಲವರು ಸಲಹೆ ನೀಡಿದರು. ಬಿಜೆಪಿಯ ಎಸ್.ಟಿ. ಸೋಮಶೇಖರ್ ಮಸೂದೆಗೆ ಬೆಂಬಲ ಸೂಚಿಸಿದರು.
ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರ ನೀಡಿದ ಶಿವಕುಮಾರ್, ‘ಈಗ ಇರುವ ಸ್ಥಿತಿಯಲ್ಲಿ ಬೆಂಗಳೂರಿನ ಸ್ಥಳೀಯ ಆಡಳಿತವನ್ನು ನಡೆಸಲಾಗದು ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದೀರಿ. ಬೆಂಗಳೂರಿನ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಈಗ ನಾವು ಬಿಬಿಎಂಪಿಯನ್ನು ಛಿದ್ರಗೊಳಿಸುತ್ತಿಲ್ಲ, ಗಟ್ಟಿಗೊಳಿಸುತ್ತಿದ್ದೇವೆ’ ಎಂದರು.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಸೂದೆ ಅಂಗೀಕಾರದ ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಲು ಮುಂದಾಗುತ್ತಿದ್ದಂತೆಯೇ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು. ಗದ್ದಲದ ಮಧ್ಯೆಯೇ ಮಸೂದೆಗೆ ಸದನದ ಅಂಗೀಕಾರ ಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.