ADVERTISEMENT

ಜಿಬಿಎ ಪಾಲಿಕೆ ಚುನಾವಣೆ: ಮಹಿಳಾ ಅಭ್ಯರ್ಥಿಗಳ ಅರ್ಜಿ ಶುಲ್ಕ ₹25 ಸಾವಿರಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 14:23 IST
Last Updated 28 ಡಿಸೆಂಬರ್ 2025, 14:23 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯಲ್ಲಿ ಉಮೇದುವಾರಿಕೆಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳ ಶುಲ್ಕವನ್ನು ಕೆಪಿಸಿಸಿ ₹25,000ಕ್ಕೆ ಇಳಿಸಿದೆ.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಗ್ಗೆ ಘೋಷಣೆ ಮಾಡಿದರು. 

ADVERTISEMENT

ಪಾಲಿಕೆ ಚುನಾವಣೆಗೆ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಮಾತನಾಡುವಾಗ ಅವರು ಅರ್ಜಿ ಶುಲ್ಕದ ವಿಚಾರವನ್ನು ಪ್ರಸ್ತಾಪಿಸಿದರು. ‘ಸಾಮಾನ್ಯ ಅಭ್ಯರ್ಥಿಗಳಿಗೆ ₹50,000, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ₹25,000 ಅರ್ಜಿ ಶುಲ್ಕ ನಿಗದಿ ಮಾಡಿದ್ದೇವೆ’ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವರು, ‘ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಆಗ ಶಿವಕುಮಾರ್‌ ಅವರು, ‘ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ₹2,000, ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ’ ಎಂದರು.

ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು, ಮಹಿಳಾ ಅಭ್ಯರ್ಥಿಗಳಿಗೆ ರಿಯಾಯಿತಿ ನೀಡಿ ಎಂದರು.

ಅದಕ್ಕೆ ಒಪ್ಪಿದ ಶಿವಕುಮಾರ್‌, ‘ಮುಖ್ಯಮಂತ್ರಿ ಮತ್ತು ಸಚಿವ ಜಾರ್ಜ್‌ ಅವರು ಹೇಳುತ್ತಿದ್ದಾರೆ ಎಂದು ಅರ್ಜಿ ಶುಲ್ಕವನ್ನು ₹25,000ಕ್ಕೆ ಇಳಿಸುತ್ತಿದ್ದೇನೆ. ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದಲೂ ಕನಿಷ್ಠ 10 ಮಹಿಳೆಯರು ಉಮೇದುವಾರಿಕೆಗೆ ಅರ್ಜಿ ಸಲ್ಲಿಸಬೇಕು. ಚೆನ್ನಾಗಿ ಕೆಲಸ ಮಾಡಿರುವವರಿಗೆ ಪ್ರಾಮುಖ್ಯನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.