ADVERTISEMENT

ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 8:27 IST
Last Updated 8 ಜನವರಿ 2022, 8:27 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 14,500 ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ. ಅವರಿಗೆ ಮಾಸಿಕ 11,000 ರಿಂದ 13,000 ಗೌರವ ಧನ ನೀಡಲಾಗುತ್ತಿದೆ. ಇದು ಸರಕಾರವೇ ನಿಗದಿ ಮಾಡಿರುವ ಮೂಲ ವೇತನಕ್ಕಿಂತ ಕಡಿಮೆ’ ಎಂದಿದ್ದಾರೆ.

‘ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ. ಭಾರತ ವಿಶ್ವಗುರು ಆಗಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವರು. ಸ್ವತಃ ಪ್ರಧಾನಿಯವರು ಇದೇ ಮಾತು ಹೇಳುತ್ತಿದ್ದಾರೆ. ವಿಶ್ವಗುರು ಆಗಬೇಕು ಎಂದರೆ ಅತ್ಯಂತ ಕನಿಷ್ಠ ಸಂಬಳಕ್ಕೆ ಉಪನ್ಯಾಸಕರನ್ನು ದುಡಿಸಿಕೊಳ್ಳುವುದೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ADVERTISEMENT

‘ಕಳೆದ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು’ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.